

ಮಂಗಳೂರು: ಲಾಕ್‌ಡೌನ್ ಬಳಿಕ ಕತಾರ್‌ನಿಂದ ಹೊರಟ ಪ್ರಥಮ ವಿಮಾನ ಶುಕ್ರವಾರ ರಾತ್ರಿ ಸುಮಾರು ಏಳು ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.
ವಂದೇ ಭಾರತ್ ಮಿಷನ್ ತೃತೀಯ ಆವೃತ್ತಿಯಲ್ಲಿ ಅವಕಾಶ ಪಡೆದ ಈ ಏರ್ ಇಂಡಿಯಾ ವಿಮಾನ ಕತಾರ್‌ನ ರಾಜಧಾನಿ ದೋಹಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ಪ್ರಯಾಣ ಆರಂಭಿಸಿತ್ತು.
40ಕ್ಕೂ ಅಧಿಕ ಗರ್ಭಿಣಿಯರು, ವಯೋವೃದ್ಧರು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗೆ ಭಾರತ ತಲುಪಲೇ ಬೇಕಾದವರು, ಆರ್ಥಿಕ ಹಿನ್ನೆಡೆಯಿಂದ ಅತಂತ್ರ ಪರಿಸ್ಥಿತಿಯಲ್ಲಿರುವ ನಿರುದ್ಯೋಗಿಗಳು, ಆನ್ ಅರೈವಲ್ ಹಾಗು ಫ್ಯಾಮಿಲಿ ವೀಸಾದಲ್ಲಿ ಬಂದು ಸಿಕ್ಕಿಕೊಂಡಿರುವವರು ಸಹಿತ 179 ಪ್ರಯಾಣಿಕರು ವಿಮಾನದಲ್ಲಿ ಇದ್ದರು. ಸುಮಾರು ಎರಡು ತಿಂಗಳಿನಿಂದ ಕಾಯುತ್ತಿದ್ದವರು ಊರು ತಲುಪುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲರನ್ನೂ ವೈದ್ಯಕೀಯ ಪರೀಕ್ಷೆ ಬಳಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಜೂನ್ 4ರಂದು ಭಾರತದ ವಿದೇಶಾಂಗ ಸಚಿವಾಲಯ ಪ್ರಕಟಿಸಿದ ವಂದೇಭಾರತ್ ಮಿಷನ್ 2ನೇ ಪಟ್ಟಿಯಲ್ಲಿ ಕೂಡ ಮಂಗಳೂರು ವಿಮಾನ ಇಲ್ಲದಿರುವ ವಿಷಯ ತಿಳಿದು ಕತಾರ್‌ನಲ್ಲಿ ಬಾಕಿಯಾಗಿದ್ದ ಕರಾವಳಿ ಜನರು ಹಾಗೂ ಕರ್ನಾಟಕ ಮೂಲದ ಕತಾರ್ ಸಂಘಸಂಸ್ಥೆಗಳ ಮುಖಂಡರಿಗೆ ತೀವ್ರ ನಿರಾಸೆಯಾಗಿತ್ತು.
ಮೂರನೇ ಪಟ್ಟಿಯಲ್ಲಿ ಮಂಗಳೂರಿಗೆ ವಿಮಾನ ದೊರೆಯುವಲ್ಲಿ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಪಾತ್ರ ಮುಖ್ಯವಾಗಿದೆ. ಇನ್ನೂ ಮಂಗಳೂರು ಕರಾವಳಿ ಭಾಗದ ಸುಮಾರು 3 ಸಾವಿರ ಜನರು ತಾಯ್ನಡಿಗೆ ಮರಳಲು ಕಾಯುತ್ತಿದ್ದಾರೆ. ಭಾರತ ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಹಕಾರ ನಮಗೆ ಬೇಕಾಗಿದೆ ಎಂದು ವಂದೇಭಾರತ್ ಮಿಷನ್ ದೋಹಾ ಕರ್ನಾಟಕ ಸದಸ್ಯ, ಕತಾರ್ ಬಂಟರ ಸಂಘದ ಅಧ್ಯಕ್ಷ ದೀಪಕ್ ಶೆಟ್ಟಿ ವಿನಂತಿಸಿದ್ದಾರೆ.