

ಮಾಗಡಿ: ಮಾಗಡಿ ತಾಲೂಕಿನ 211 ಕೆರೆಗಳಿಗೆ ನೀರು ತುಂಬಿಸಲು ರೂಪಿಸಿರುವ ಶ್ರೀರಂಗ ಯೋಜನೆಗೆ ಸರ್ಕಾರ 175 ಕೋಟಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಬುಧವಾರ ಮಾಗಡಿ ತಾಲೂಕು ಪ್ರವಾಸ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸತ್ಯಗಾಲದಿಂದ ಶಿಂಷಾ ಮೂಲಕ ಚನ್ನಪಟ್ಟಣದ ಕಣ್ವ, ವೈಜಿಗುಡ್ಡ, ಮಂಚನಬಲೆ ಜಲಾಶಯಗಳಿಗೆ ನೀರು ತುಂಬಿಸಿ ನಂತರ ಮಾಗಡಿ ಕೆರೆಗಳಿಗೆ ಹರಿಸುವ ಯೋಜನೆ ಇದಾಗಿದೆ. ಇದರಿಂದ ಅಂತರ್ಜಲ ಹೆಚ್ಚಿ ಕೊಳವೆ ಬಾವಿಗಳು ಭರ್ತಿಯಾಗುತ್ತವೆ. ಕೆಂಪೇಗೌಡರ ವೀರಸಮಾಧಿ ಅಭಿವೃದ್ಧಿ, ನಾಲ್ಕು ಪಥದ ರಸ್ತೆ ಕಾಮಗಾರಿ ಆರಂಭವಾಗಿದೆ. ನರೇಗಾ ಯೋಜನೆ ಅಡಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳು ತೆಗೆದು ಎತ್ತಿನಹೊಳೆ ನೀರು ಹರಿಸಲಾಗುವುದು ಎಂದರು. ಬಿಜೆಪಿ ಅಧ್ಯಕ್ಷ ಧನಂಜಯ ಮಾತನಾಡಿ, ಮಾಗಡಿ ವಿಧಾನಸಭಾ ಕ್ಷೇತ್ರದ 35 ಗ್ರಾಪಂನಲ್ಲಿ 6 ಪಂಚಾಯಿತಿಗಳಲ್ಲಿ ಅಧಿಕಾರ ಪಡೆಯುತ್ತೇವೆ ಎಂದರು. ವಿಧಾನ ಪರಿಷತ್ ಸದಸ್ಯ ಆ. ದೇವೇಗೌಡ, ಸಿದ್ದರಾಜು, ರಾಘವೇಂದ್ರ, ಶಶಿಧರ್, ಗೋಪಿ, ಮೋಹನ್ ಹಾಗೂ ಇತರರು ಇದ್ದರು.
ರೈತರಿಗೆ ಅಭಿನಂದನೆ
ಮಾಗಡಿ ತಾಲೂಕು ಪ್ರವಾಸದಲ್ಲಿದ್ದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ರೈತ ದಿನಾಚರಣೆ ಅಂಗವಾಗಿ ಉಕ್ಕಡ ಗ್ರಾಮದಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ರೈತರನ್ನು ಅಭಿನಂದಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ ಬಿಜೆಪಿ ಸೇರ್ಪಡೆ ವೇದಿಕೆಯಲ್ಲಿ ಕುಸಿದು ಸಾವನ್ನಪ್ಪಿದ ತಿಪ್ಪಸಂದ್ರ ಹೋಬಳಿ ಬಿಜೆಪಿ ಕಾರ್ಯದರ್ಶಿ ಹೆಬ್ಬಳಲು ಶಿವರಾಜು ಮನೆಗೆ ತೆರಳಿ ಅವರ ಪತ್ನಿ ಹಾಗೂ ಮಗನಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು.
ನಮ್ಮದು ಒಂದೇ ಟೀಂ ಅದು ಬಿಜೆಪಿ ಮಾತ್ರ
ಯಾವುದೇ ಪಕ್ಷದೊಂದಿಗೆ ನಮ್ಮ ಪಕ್ಷ ವಿಲೀನಗೊಳಿಸುವುದಿಲ್ಲ. ಬಿ ಟೀಂ ಎ ಟೀಂಗಳೆಲ್ಲಾ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ. ನಮ್ಮದೇನಿದ್ದರೂ ಒಂದೇ ಟೀಂ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದರು. ನಮ್ಮ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೇ ನೇರವಾಗಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದರು.