

ಶಿಡ್ಲಘಟ್ಟ : ಅಮರಾವತಿ ಬಳಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಮೀಸಲಿಟ್ಟಿರುವ ಜಾಗವನ್ನು ಶನಿವಾರ ಪರಿಶೀಲಿಸಿ, 172 ಎಕರೆ ಪ್ರದೇಶದಲ್ಲಿ ವಿವಿ ತಲೆ ಎತ್ತಲಿದ್ದು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂ. ಗ್ರಾಮಾಂತರ ಜಿಲ್ಲೆಗಳ ವಿದ್ಯಾರ್ಥಿಗಳ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ 110.25 ಎಕರೆ ಸರ್ಕಾರಿ ಜಮೀನನ್ನು ವಿವಿಗೆ ಹಸ್ತಾಂತರಿಸಲಾಗಿದೆ.
ಉಳಿದಂತೆ 61.15 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಅಮರಾವತಿ ಸೂಕ್ತ ಜಾಗವಾಗಿದ್ದು ಇಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಇಲ್ಲ, ಜತೆಗೆ ವಿದ್ಯಾಭ್ಯಾಸಕ್ಕೂ ಪೂರಕವಾದ ಪ್ರಶಾಂತ ವಾತಾವರಣ ಹೊಂದಿದೆ. ಹಸಿರು ವಾತಾವರಣದಲ್ಲಿ ಹೈಟೆಕ್ ಕ್ಯಾಂಪಸ್ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿವಿಗೆ ಅಗತ್ಯವಿರುವ 172 ಎಕರೆ ಪೈಕಿ 61.15 ಎಕರೆ ಜಾಗದ ನೇರ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ. ಕಾಮಗಾರಿಗಳು ವಿವಿಧ ಸೆಕ್ಟರ್‌ಗಳಲ್ಲಿ ನಡೆಯಲಿದ್ದು, ಕೆಲಸ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಶಿಕ್ಷಣ ಸೌಲಭ್ಯಗಳು ಸಿಗಲಿವೆ ಎಂದು ಉತ್ತರ ವಿವಿ ಉಪ ಕುಲಪತಿ ಕೆಂಪರಾಜು ವಿಶ್ವಾಸ ವ್ಯಕ್ತಪಡಿಸಿದರು.
ಭೂ ದಾಖಲಾತಿ ಅಧಿಕಾರಿ ಡಿ.ರವಿಕುಮಾರ್ ಯಾದವ್, ಚೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ ಇತರರಿದ್ದರು.