

ತುಮಕೂರು: ಜಿಲ್ಲೆಯಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿದ್ದು, ಬುಧವಾರ ಬರೋಬ್ಬರಿ 171 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 3749ಕ್ಕೇರಿದೆ. 103 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತರೆಳಿದ್ದು 2665 ಜನರು ಗುಣಮುಖರಾದಂತಾಗಿದೆ.
ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಸಾವಿನ ಸಂಖ್ಯೆ117ಕ್ಕೇರಿದೆ. ತುಮಕೂರು ತಾಲೂಕಿನಲ್ಲಿ ಅತೀ ಹೆಚ್ಚು 50 ಜನರಲ್ಲಿ ಸೋಂಕು ದೃಢವಾಗಿದ್ದು ಜಿಲ್ಲೆಯಲ್ಲಿ 967 ಸಕ್ರಿಯ ಪ್ರಕರಣಗಳಿವೆ. ತುಮಕೂರು ಸದಾಶಿವನಗರದ 50 ವರ್ಷದ ವ್ಯಕ್ತಿ, ಕುಣಿಗಲ್ ತಾಲೂಕು ಗೊಟ್ಟಿಕೆರೆಯ 70 ವರ್ಷದ ವೃದ್ಧ ಹಾಗೂ ಡಿ ಗ್ರೂಪ್ ಬಡಾವಣೆಯ 79 ವರ್ಷದ ವ್ಯಕ್ತಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇನ್ನೂ 14 ಜನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಬುಧವಾರ ಚಿಕ್ಕನಾಯಕನಹಳ್ಳಿ 5, ಗುಬ್ಬಿ 6, ಕೊರಟಗೆರೆ 7, ಕುಣಿಗಲ್ 21, ಮಧುಗಿರಿ 21, ಪಾವಗಡ 24, ಶಿರಾ 10, ತಿಪಟೂರು 18, ತುಮಕೂರು 50, ತುರುವೇಕೆರೆ 9 ಒಟ್ಟು 171 ಜನರಿಗೆ ಸೋಂಕು ದೃಢವಾಗಿದೆ. ಇವರಲ್ಲಿ 100 ಪುರುಷರು ಹಾಗೂ 71 ಮಹಿಳೆಯರಿದ್ದಾರೆ. 60 ವರ್ಷ ಮೇಲ್ಪಟ್ಟ 35 ಜನ, ಐದು ವರ್ಷದೊಳಗಿನ ನಾಲ್ವರು ಮಕ್ಕಳಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಒಬ್ಬ ಗರ್ಭಿಣಿಗೆ ಸೋಂಕು ಕಾಣಿಸಿದೆ, ಬುಧವಾರ ಸೋಂಕು ಕಾಣಿಸಿಕೊಂಡ 109 ಜನರಲ್ಲಿ ರೋಗದ ಲಕ್ಷಣವಿಲ್ಲದಿರುವುದು ಗಮನಾರ್ಹ. ಸೋಂಕಿತ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು ಬಹುತೇಕರಿಗೆ ರೋಗದ ಯಾವುದೇ ಲಕ್ಷಣಗಳಿಲ್ಲ. ವೃದ್ಧರಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮಯಸ್ಸಾದ ಹಿರಿಯರು ಸಾಧ್ಯವಾದಷ್ಟು ಮನೆಯಲ್ಲಿಯೇ ಉಳಿಯಲು ಆರೋಗ್ಯ ಇಲಾಖೆ ಮನವಿ ಮಾಡಿದೆ. ಅನಿವಾರ್ಯವಾಗಿ ಹೊರಗೆ ಓಡಾಡಿ ರೋಗ ಲಕ್ಷಣಗಳು ಕಾಣಿಸಿದರೆ ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟು ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚು. ಕರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯವಿಲ್ಲ ಎಂಬ ಬಗ್ಗೆ ವಿಜಯವಾಣಿಯಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಬುಧವಾರ ಪರಿಶೀಲನೆ ನಡೆಸಿದರು. ಮಕ್ಕಳಿಗೆ ಲಸಿಕೆ ಹಾಕಲು ಬೇರೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಾರ್ವಜನಿಕರ ಮನವಿಗೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಪಾವಗಡದಲ್ಲಿ ಸೋಂಕಿತರ ಸಂಖ್ಯೆ 311: ನೆರೆಯ ಆಂಧ್ರಕ್ಕೆ ಹೊಂದಿಕೊಂಡಿರುವ ಪಾವಗಡ ತಾಲೂಕಿನಲ್ಲಿ ಬುಧವಾರ 24 ಜನರಲ್ಲಿ ಸೋಂಕು ದೃಢವಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 311ಕ್ಕೇರಿದೆ. ಸೋಂಕಿಗೆ 6 ಜನರು ಬಲಿಯಾಗಿದ್ದಾರೆ. ಇದರ ನಡುವೆ ತಾಲೂಕಿನ ಸಿ.ಕೆ.ಪುರ ಗ್ರಾಪಂನ ದೇವರಹಟ್ಟಿ, ಹನುಮಸಾಗರ, ಹರಿಹರಪುರ, ಚನ್ನಸಾಗರದಹಟ್ಟಿಯಲ್ಲಿ ಚಿಕೂನ್‌ಗುನ್ಯಾ ಕೂಡ ಕಾಣಿಸಿಕೊಂಡಿದ್ದು ಜನರು ನರಳುವಂತಾಗಿದೆ. ಸ್ಥಳೀಯ ಪಂಚಾಯಿತಿ ಸಿಬ್ಬಂದಿ ಸ್ವಚ್ಛತೆ ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದ್ದು ಗ್ರಾಮಸ್ಥರ ನಿದ್ದೆಕೆಡಿಸಿದೆ.