

ಮುಂಡರಗಿ: ಮಲೆನಾಡಿನ ಹಲವೆಡೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ದಿನೇ ದಿನೆ ಒಳಹರಿವು ಹೆಚ್ಚಳವಾಗುತ್ತಿದ್ದು, ನದಿ ಉಕ್ಕಿ ಹರಿಯುತ್ತಿದೆ. ತಾಲೂಕಿನ ಹಮ್ಮಿಗಿ ಸಮೀಪದ ಸಿಂಗಟಾಲೂರು ಬ್ಯಾರೇಜ್ನ 26 ಗೇಟ್ಗಳ ಪೈಕಿ 17 ಗೇಟ್ಗಳ ಮೂಲಕ ನೀರನ್ನು ಹರಿಬಿಡಲಾಗುತ್ತಿದೆ.
ಸಿಂಗಟಾಲೂರು ಬ್ಯಾರೇಜ್ನಿಂದ ಭಾನುವಾರ 1,68,488 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ನೀರಿನ ಮಟ್ಟವು ಹೆಚ್ಚಳವಾಗುತ್ತಿರುವುದರಿಂದ ಬ್ಯಾರೇಜ್ ಹಿನ್ನೀರಿಗೆ ಮುಳುಗಡೆಗೆ ಒಳಪಡುವ ವಿಠ್ಠಲಾಪುರ ಗ್ರಾಮದ ಕೆಲ ಮನೆಗಳ ಮುಂದೆ ಭಾನುವಾರ ನದಿ ನೀರು ನಿಂತಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಸಿಂಗಟಾಲೂರು ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿನ್ನೀರಿನಿಂದ ತಾಲೂಕಿನ ಗುಮ್ಮಗೋಳ, ಬಿದರಹಳ್ಳಿ, ವಿಠ್ಠಲಾಪುರ ಮತ್ತು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮ ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿವೆ. ನಾಲ್ಕು ಗ್ರಾಮಗಳು ಸಂಪೂರ್ಣವಾಗಿ ಸ್ಥಳಾಂತರಗೊಳ್ಳದ ಕಾರಣ ಬ್ಯಾರೇಜ್ನಲ್ಲಿ 1.90 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಸುಮಾರು 2ರಿಂದ 2.50 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಹರಿದು ಬಂದಾಗ ಬ್ಯಾರೇಜ್ನ 26 ಗೇಟ್ಗಳನ್ನು ತೆರೆದರೂ ಮುಳುಗಡೆಗೆ ಒಳಪಡುವ ಗ್ರಾಮಗಳು ಪ್ರವಾಹ ಸಮಸ್ಯೆ ಎದುರಿಸಬೇಕಾಗುತ್ತದೆ.
ಮಲೆನಾಡಿನ ವಿವಿಧ ಭಾಗದಲ್ಲಿನ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಅಪಾರ ನೀರು ಬರುತ್ತಿದೆ. ಬ್ಯಾರೇಜ್ನಲ್ಲಿ 1.90 ಟಿಎಂಸಿ ಮಾತ್ರ ಸಂಗ್ರಹಿಸಿಟ್ಟುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ತುಂಗಭದ್ರಾ ನದಿ ಒಳಹರಿವು ಇನ್ನೂ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ. | ರಾಘವೇಂದ್ರ ಎಚ್.ಸಿ. ಎಇಇ, ಸಿಂಗಟಾಲೂರು ಬ್ಯಾರೇಜ್
-