

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಕರೊನಾ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ದಂಡಾಸ ಪ್ರಯೋಗಿಸುತ್ತಿರುವ ಜಿಲ್ಲಾ ಪೊಲೀಸ್ ಇಲಾಖೆ ಲಾಕ್‌ಡೌನ್ ತೆರವಿನಿಂದ ಇದುವರೆಗೆ 17,751 ಪ್ರಕರಣ ದಾಖಲಿಸಿದ್ದು, 17,45,800 ರೂ. ದಂಡ ವಸೂಲಿ ಮಾಡಿದೆ.
ಕರೊನಾ ಪ್ರಕರಣ ತೀವ್ರಗೊಳ್ಳುತ್ತಿರುವ ನಡುವೆಯೇ ನಿಯಮ ಉಲ್ಲಂಘನೆಯೂ ಅವ್ಯಾಹತವಾಗಿದೆ. ಸೋಂಕು ಹತೋಟಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ಆರೋಗ್ಯ ಇಲಾಖೆ, ಪುರಸಭೆ ಹಾಗೂ ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದೆ. ಇದರೊಂದಿಗೆ ಜಿಲ್ಲಾ ಪೊಲೀಸರು ದಂಡ ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ.
ಸರಕು ವಾಹನಗಳಲ್ಲಿ ಉಲ್ಲಂಘನೆ: ಗ್ರಾಮೀಣ ಪ್ರದೇಶಗಳಲ್ಲಿ ಆಟೋ ಮತ್ತಿತರ ಸರಕು ಸಾಗಣೆ ವಾಹನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಪ್ರಯಾಣಿಕರು ಒತ್ತೊತ್ತಿಗೆ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕು ತೀವ್ರವಾಗಿ ಹರಡಲು ಕಾರಣವಾಗುತ್ತಿದೆ ಎನ್ನಲಾಗಿದೆ. ಆದ್ದರಿಂದ ಇಂಥ ವಾಹನಗಳ ಸಂಚಾರದ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಜಿಲ್ಲಾ ಪೊಲೀಸರು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದಾರೆ.
ಖಾಕಿಯೊಂದಿಗೆ ಜಟಾಪಟಿ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಹಲವು ಕಡೆಗಳಲ್ಲಿ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದಂಡ ವಿಧಿಸುವ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಪ್ರತಿನಿತ್ಯದ ಕಾನೂನು ಸುವ್ಯವಸ್ಥೆ ಕರ್ತವ್ಯದೊಂದಿಗೆ ನಿಯಮ ಉಲ್ಲಂಘನೆ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಪೊಲೀಸ್ ಇಲಾಖೆ ಹೈರಾಣಾಗುತ್ತಿದೆ.
16258 ಸೋಂಕಿತರು: ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿಯಂತೆ ಈಗಾಗಲೇ ಸೋಂಕಿತರ ಸಂಖ್ಯೆ 16,258 ದಾಟಿದೆ. ಕರೊನಾಗೆ ಇದುವರೆಗೆ 127 ಮಂದಿ ಮೃತಪಟ್ಟಿದ್ದಾರೆ. 12,852ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3279 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ನಗರ ಪ್ರದೇಶಕಷ್ಟೇ ಸೀಮಿತ: ನಗರ, ಪಟ್ಟಣ ಪ್ರದೇಶಗಳಲ್ಲಷ್ಟೇ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಆದರೆ ಗ್ರಾಮಗಳಲ್ಲಿ ಪೊಲೀಸರ ಸುಳಿವಿಲ್ಲ. ಹೋಬಳಿ ಕೇಂದ್ರಗಳಲ್ಲೂ ದಂಡ ಪ್ರಯೋಗ ಪರಿಣಾಮಕಾರಿಯಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಪೊಲೀಸರು ದಂಡ ವಿಧಿಸುವುದು ಕೇವಲ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಸೀಮಿತವಾಗಿದೆ, ಗ್ರಾಮಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಕರೊನಾ ನಿಯಮ ನಿರ್ಲಕ್ಷ್ಮಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಜಿಲ್ಲೆಯಾದ್ಯಂತ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಇದುವರೆಗೆ 17 ಸಾವಿರ ಪ್ರಕರಣ ದಾಖಲಿಸಿದ್ದು, 17 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ. ಸಾರ್ವಜನಿಕರು ಕರೊನಾ ನಿಯಮ ಪಾಲನೆ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು. ರವಿ.ಡಿ.ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರೊನಾ ನಿಯಂತ್ರಣ ದೃಷ್ಟಿಯಿಂದ ಕರೊನಾ ಪರೀಕ್ಷೆ ಹೆಚ್ಚಿಸಲಾಗಿದೆ, ಸೋಂಕಿತರಿಗೆ ಶೀಘ್ರ ಚಿಕಿತ್ಸೆ ಕೊಡಿಸುವುದು ಇದರ ಉದ್ದೇಶವಾಗಿದೆ. ಆದರೆ ಕೆಲವು ಕಡೆ ಸಾರ್ವಜನಿಕರು ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆೆ. ಸಾರ್ವಜನಿಕರು ಸಹಕರಿಸದಿದ್ದರೆ ಕರೊನಾ ನಿಯಂತ್ರಣ ಕಷ್ಟಸಾಧ್ಯವಾಗಲಿದೆ. ಡಾ.ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ