

ಕಲಘಟಗಿ: ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 17 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ವಶಪಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ತಂಡ ಖಚಿತ ಮಾಹಿತಿ ಮೇರೆಗೆ ಪಟ್ಟಣದ ಅಕ್ಕಿ ಓಣಿಯಲ್ಲಿ ರಾಜು ಶೆಟ್ಟಿ ಎಂಬುವವರು ದಾಸ್ತಾನು ಮಾಡಲಾಗಿದ್ದ ಅಂಗಡಿ ಮೇಲೆ ದಾಳಿ ನಡೆಸಿತ್ತು. ಮೊದಲೇ ಮಾಹಿತಿ ತಿಳಿದು ಅಂಗಡಿ ಮಾಲೀಕ ಅಂಗಡಿ ಬಾಗಿಲು ಬಂದ್ ಮಾಡಿಕೊಂಡು ಹೋಗಿದ್ದರು. ಡಿಸಿ ಅವರ ಅನುಮತಿ ಮೇರೆಗೆ ಅಂಗಡಿ ಬಾಗಿಲು ಮುರಿದು ಒಳಗಿದ್ದ 17 ಕ್ವಿಂಟಲ್ ಅಕ್ಕಿ ವಶಪಡಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಇದಕ್ಕೂ ಮೊದಲು ಪಟ್ಟಣದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ಆಯೋಗದ ತಂಡ, ಪರಿಶೀಲನೆ ನಡೆಸಿ ದಾಸ್ತಾನು ಸಂಗ್ರಹದ ಬಗ್ಗೆ ಮಾಹಿತಿ ಪಡೆದರು. ದಾಸ್ತಾನು ಸಂಗ್ರಹದಲ್ಲಿ ವ್ಯತ್ಯಾಸ ಇರುವ ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿ ಎಚ್ಚರಿಸಲಾಯಿತು. ಎಚ್ಪಿ ಗ್ಯಾಸ್ ಅಂಗಡಿಗೆ ಭೇಟಿ ನೀಡಿದ ಆಯೋಗ, ಸಿಲಿಂಡರ್ ದಾಸ್ತಾನು ಸಂಗ್ರಹಕ್ಕೆ ಪಡೆದಿರುವ ಅನುಮತಿ ಸ್ಥಳದಿಂದಲೇ ಸಿಲಿಂಡರ್ ಪೂರೈಕೆ ಮಾಡಬೇಕು ಎಂದು ಸೂಚಿಸಿತು.
ಈ ವೇಳೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ, ಸದಸ್ಯರಾದ ಲಿಂಗರಾಜ ಕೋಟೆ, ಸುಮಂತರಾವ್, ಮಾರುತಿ ದೊಡ್ಡಲಿಂಗಣ್ಣವರ, ರೋಹಿಣಿ ಪ್ರಿಯಾ, ವಿಜಯಲಕ್ಷಿ್ಕೕ, ಧಾರವಾಡ ಜೆ.ಡಿ. ಚನ್ನಬಸಪ್ಪ ಕೊಡ್ಲಿ,ಸಹಾಯಕ ನಿರ್ದೆಶಕ ಎಚ್.ಡಿ. ಪಾಟೀಲ, ವಸುಂದರಾ ಹೆಗಡೆ, ಲಕ್ಷ್ಮೀ ಎಸ್.ಜೆ. ಇತರರಿದ್ದರು.