

ಹುಬ್ಬಳ್ಳಿ: ಗಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಹಳೇ ಹುಬ್ಬಳ್ಳಿ ಹಾಗೂ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 17 ಜನರನ್ನು ಬಂಧಿಸಿದ್ದು, ಬಂಧಿತರಿಂದ 4.37 ಲಕ್ಷ ರೂ. ಮೌಲ್ಯದ ಗಾಂಜಾ ಸೇರಿ ವಿವಿಧ ವಸ್ತುಗಳನ್ನು ದಸ್ತಗಿರಿ ಮಾಡಲಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಹಾನಿಂಗ ನಂದಗಾವಿ ಅವರು ಮಾತನಾಡಿ, ಆನಂದ ನಗರ ಕುಷ್ಠರೋಗಿಗಳ ಆಸ್ಪತ್ರೆ ಬಳಿ ಶೆಡ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 9 ಜನರನ್ನು ಬಂಧಿಸಲಾಗಿದೆ. ಆಷ್ಫಕ್ ಮುಲ್ಲಾ, ಶಿವಕುಮಾರ ತಮಕೂರ, ಇಕ್ಬಾಲ್ ಅಹ್ಮದ್ ಮುದಗಲ್, ಆರೀಫ್ ಗಲಗಲಿ, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹ್ಮದ್ ರೆಹಾನ್ ಗೋಕಾಕ, ಸಾಧಿಕ್ ಕಿತಾಬ್‌ವಾಲೆ, ಮೆಹಬೂಬ ಸಾಬ್ ಡೌಗಿ ಬಂಧಿತರು. ಬಂಧಿತರಿಂದ 1.25 ಲಕ್ಷ ರೂ. ಮೌಲ್ಯದ 1,500 ಗ್ರಾಂ ಗಾಂಜಾ, 60 ಸಾವಿರ ರೂ. ಮೌಲ್ಯದ 6 ಮೊಬೈಲ್ ಫೋನ್, 2ಸಾವಿರ ರೂ. ನಗದು ಸೇರಿ ಒಟ್ಟು 1.87 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಉಪನಗರ ಠಾಣೆ ವ್ಯಾಪ್ತಿಯಲ್ಲಿ 3 ಗಾಂಜಾ ಮಾರಾಟಗಾರರು, 3 ಖರೀದಿದಾರರು ಮತ್ತು ಇಬ್ಬರು ವ್ಯಸನಿಗಳನ್ನು ಬಂಧಿಸಲಾಗಿದೆ. ವೈಭವ ಪರಬ, ರಾಕೇಶ ನಾಯಕ್, ಗಣಪತಸಾ ಅಥಣಿ, ಮಾರುತಿ ಸಬರದ, ಚಂದ್ರಪ್ಪ ಕಮ್ಮಾರ, ಗಣೇಶ ಯಾದವ, ರಮೇಶ ಮಾದರ, ನಿತಿನ್ ಮೇದಾರ ಬಂಧಿತರು. ಬಂಧಿತರಿಂದ 1630 ಗ್ರಾಂ ಗಾಂಜಾ, ಒಂದು ಬೈಕ್, 7 ಮೊಬೈಲ್ ಫೋಣ್ ಹಾಗೂ 2,300 ರೂ. ಜಗದು ಸೇರಿ ಒಟ್ಟು 2.50 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಅಂತರಜಿಲ್ಲಾ ಕಳ್ಳನ ಬಂಧನ: ಹಗಲುವೇಳೆ ಮನೆ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ ಆನಂದ ನಗರದ ಮಹಮ್ಮದ್‌ಅಲಿ ನಾಲಾಬಂದ ಎಂಬಾತನನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕೇಶ್ವಾಪುರ, ಅಶೋಕನಗರ ಹಾಗೂ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 3.10 ಲಕ್ಷ ರೂ. ಮೌಲ್ಯದ 47 ಗ್ರಾಂ ಚಿನ್ನಾಆಭರಣ, ಒಂದು ಬೈಕ್ ವಶಪಡಿಸಿಕೊಂಡು ಬಂಧಿನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈತನ ಮೇಲೆ ಇತರ ಜಿಲ್ಲೆಯಲ್ಲಿಯೂ ಪ್ರಕರಣ ದಾಖಲಾಗಿವೆ ಎಂದರು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ, ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯಕ್, ಕೇಶ್ವಾಪುರ ಠಾಣೆ ಪಿಐ ಕೆ.ಎಸ್. ಹಟ್ಟಿ, ಉಪನಗರ ಠಾಣೆ ಪಿಐ ಎಂ.ಎಸ್. ಹೂಗಾರ, ಹಳೇ ಹುಬ್ಬಳ್ಳಿ ಠಾಣೆ ಪಿಐ ಸುರೇಶ ಯಳ್ಳೂರ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿದ್ದರು.