

ಚನ್ನಗಿರಿ: ಅಡಕೆ ಖರೀದಿಗೆ ಹೋದವರ ವಾಹನ ತಡೆದು ಮಾರಕಾಸ್ತ್ರಗಳನ್ನು ತೋರಿಸಿ ಅವರಲ್ಲಿದ್ದ 17.27 ಲಕ್ಷ ರೂ.ಗಳನ್ನು ದುಷ್ಕರ್ಮಿಗಳು ಸೋಮವಾರ ದೋಚಿ ಪರಾರಿಯಾಗಿದ್ದಾರೆ.
ತಾಲೂಕು ಬುಳಸಾಗರ ಗ್ರಾಮದ ಅಶೋಕ, ಮಂಜಪ್ಪ, ರುದ್ರಪ್ಪ, ಅಜ್ಜಯ್ಯ, ಇನಾಯತ್ ಎಂಬುವವರು ಭದ್ರಾವತಿ ತಾಲೂಕು ಕಲ್ಲಾಪುರ ಗ್ರಾಮದಲ್ಲಿ ಅಡಕೆ ಖರೀದಿ ಮಾಡಲೆಂದು ಬುಲೆರೋದಲ್ಲಿ ತೆರಳಿದ್ದರು.
ಅಜ್ಜಿಹಳ್ಳಿ ಗ್ರಾಮದ ತರಳಬಾಳು ವೃತ್ತದಿಂದ ಎಂಟು ಜನರುಳ್ಳ ಇನ್ನೋವಾ ಕಾರು ಇವರನ್ನು ಬೆನ್ನತ್ತಿ ಜೋಳದಾಳು ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಬಳಿ ಅಡ್ಡಗಟ್ಟಿ ನಿಲ್ಲಿಸಿದ್ದರು.
ನಂತರ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಹಣ ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‌ಪಿ ಸ್ಯಾಮ್ ವರ್ಗೀಸ್, ಸಿಪಿಐ ಬಾಲಚಂದ್ರ ನಾಯ್ಕ ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಎಎಸ್‌ಪಿ ಸ್ಯಾಮ್ ವರ್ಗೀಸ್ ಮಾತನಾಡಿ, ಮಾಹಿತಿ ತಿಳಿದ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತಂದು ಪೊಲೀಸರ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಕಳುಹಿಸಲಾಗಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದರು. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.