ನೈಋತ್ಯ ರೈಲ್ವೆ ವಲಯಕ್ಕೆ 2709 ಕೋಟಿ ರೂ. ಅನುದಾನ

010101
Published on

ಬೆಳಗಾವಿ: ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯ ಘೋಷಣೆಯಾಗಿ 17 ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ನಲ್ಲಿ 2,709 ಕೋಟಿ ರೂ. ದಾಖಲೆ ಅನುದಾನವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ದೂರದೃಷ್ಟಿಯಿಂದ ಕೋಟ್ಯಂತರ ರೂ. ಅನುದಾನ ನೀಡಿರುವುದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.

ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೆಳಗಾವಿ-ಧಾರವಾಡ ವಾಯಾ ಕಿತ್ತೂರು 73 ಕಿ.ಮೀ. ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 988 ಕೋಟಿ ರೂ. ಅನುದಾನ ಕೊಡಿಸುವಲ್ಲಿ ರೈಲ್ವೆ ಖಾತೆ ರಾಜ್ಯಸಚಿವ ಸುರೇಶ ಅಂಗಡಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ-ಧಾರವಾಡ ವಾಯಾ ಕಿತ್ತೂರು ರೈಲು ಮಾರ್ಗ ಆರಂಭಿಸುವ ಕುರಿತು 1980ರಿಂದಲೂ ಹೋರಾಟ ನಡೆಯುತ್ತಿತ್ತು. ಯಾವುದೇ ಸರ್ಕಾರವು ಅನುಷ್ಠಾನಗೊಳಿಸಿರಲಿಲ್ಲ. ಇದೀಗ ಕೇಂದ್ರ ಸರ್ಕಾರವು ಜೋಡು ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಜೀವ ತುಂಬಿದ್ದಾರೆ.

ಇದರಿಂದ ಸವದತ್ತಿ, ಕಿತ್ತೂರು, ಬೈಲಹೊಂಗಲ, ಬೆಳಗಾವಿ ಗ್ರಾಮೀಣ ಕ್ಷೇತ್ರಗಳ ವ್ಯಾಪ್ತಿಯ 600ಕ್ಕೂ ಅಧಿಕ ಗ್ರಾಮಗಳಿಗೆ ಈ ರೈಲು ಮಾರ್ಗ ಆರಂಭವಾಗುವುದರಿಂದ ಅನುಕೂಲವಾಗಲಿದೆ. ಅಲ್ಲದೆ ಹೊಸಪೇಟೆ-ಹುಬ್ಬಳ್ಳಿ- ಲೋಂಡಾ-ತಿನೈಘಾಟ್- ವಾಸ್ಕೋ-ಡ-ಗಾಮಾ ಜೋಡು ಮಾರ್ಗ ನಿರ್ಮಾಣಕ್ಕಾಗಿ 225 ಕೋಟಿ ರೂ. ಘೋಷಿಸಲಾಗಿದೆ. ಬಾಗಲಕೋಟೆ-ಕುಡಚಿ ಹೊಸ ರೈಲು ಮಾರ್ಗಕ್ಕೆ 37 ಕೋಟಿ ರೂ., ಮಿರಜ್- ಲೋಂಡಾ ಮಧ್ಯದ ವಿದ್ಯುದ್ದೀಕರಣ ಕಾಮಗಾರಿಗೆ 70 ಕೋಟಿ ರೂ.ಮೀಸಲಿಡಲಾಗಿದೆ.

ರೈಲು ಮಾರ್ಗ ನವೀಕರಣಕ್ಕೆ 410 ಕೋಟಿ ರೂ., ರಾಯದುರ್ಗ- ತುಮಕೂರು ವಾಯಾ ಕಲ್ಯಾಣದುರ್ಗ ಹೊಸ ಮಾರ್ಗಕ್ಕೆ 170 ಕೋಟಿ ರೂ., ಗದಗ-ವಾಡಿ ರೈಲು ಮಾರ್ಗಕ್ಕೆ 156 ಕೋಟಿ ರೂ., ಅರಸಿಕೇರಿ- ತುಮಕೂರು ಜೋಡು ಮಾರ್ಗಕ್ಕೆ 202 ರೂ., ಹುಬ್ಬಳ್ಳಿ- ಚಿಕ್ಕ ಜಾಜೂರು ಜೋಡು ಮಾರ್ಗಕ್ಕೆ 171 ಕೋಟಿ ರೂ. ಅನುದಾನ ನೀಡಲಾಗಿದೆ.

ಅದಲ್ಲದೆ ಹೊಸೂರು-ಓಮಲೂರು 147 ಕೀ.ಮೀ. ಜೋಡು ಮಾರ್ಗಕ್ಕೆ 1470 ಕೋಟಿ ರೂ. ಹಾಗೂ ಚಂದೋರಗಾಂವ-ಕನ್ಸೋಲಿಯಂ 16 ಕಿ.ಮೀ. ರೈಲು ಮೇಲ್ಸೇತುವೆ ನಿರ್ಮಾಣಕ್ಕೆ 1892 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಟ್ರಾಫಿಕ್ ಆಧುನೀಕರಣಕ್ಕಾಗಿ 548 ಕೋಟಿ ರೂ., ರಸ್ತೆ ಸುರಕ್ಷೆಗೆ 200 ಕೋಟಿ ರೂ., ಹಲವು ಕಾಮಗಾರಿ ಕೈಗೊಳ್ಳುವುದಕ್ಕೆ ಹಣ ಮೀಸಲಿಡಲಾಗಿದೆ.

ನಮ್ಮ ರಾಜ್ಯಕ್ಕೆ ಹೆಚ್ಚಿನ ಆದ್ಯತೆಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು, ಇಡೀ ದೇಶದಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಆಸಕ್ತಿ ವಹಿಸಿ, ಕೋಟ್ಯಂತರ ರೂ.ಗಳ ಅನುದಾನವನ್ನು ರೈಲ್ವೆ ಇಲಾಖೆಗೆ ನೀಡುತ್ತಿದ್ದಾರೆ. 2024ರ ಅವಧಿಯೊಳಗೆ ಇಡೀ ದೇಶದ ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಲಾಗುತ್ತಿದೆ. ಜತೆಗೆ ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ನೈರುತ್ಯ ರೈಲ್ವೆಗೆ 2709 ಕೋಟಿ ರೂ. ಅನುದಾನ ಕೊಡಿಸುವುದರ ಜತೆಗೆ ಸಮರೋಪಾದಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. |ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net