17.69 ಲಕ್ಷ ರೂ. ಉಳಿತಾಯ ಬಜೆಟ್

26 SARAG 1
Published on

ಸರಗೂರು: ಪಟ್ಟಣ ಪಂಚಾಯಿತಿಯ 2025-2026ನೇ ಸಾಲಿಗೆ ಒಟ್ಟು 17.69 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಂಡಿಸಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮೂರನೇ ಬಾರಿಗೆ ಆಯವ್ಯಯ ಮಂಡಿಸಿದರು. 2025-26ನೇ ಸಾಲಿನ ಪ್ರಾರಂಭಿಕ ಶುಲ್ಕ 6.19 ಕೋಟಿ ರೂ., 8.9 ಕೋಟಿ ರೂ. ಜಮೆ ಆಗಲಿದೆ. ಈ ಪೈಕಿ 14.28 ಕೋಟಿ ರೂ. ಜುಮ್ಲಾ ಆಗಲಿದೆ. ಇದರಲ್ಲಿ 14.11 ಕೋಟಿ ರೂ. ಖರ್ಚು ತಗಲಿದೆ. ಹೀಗಾಗಿ 17.69 ಲಕ್ಷ ರೂ. ಉಳಿತಾಯವಾಗಲಿದೆ ಎಂದರು.

ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸುವುದರೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡಿರುವ ಬಜೆಟ್‌ನಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಲಾಗಿದೆ. ಆಸ್ತಿ ತೆರಿಗೆಯಿಂದ 70 ಲಕ್ಷ ರೂ., ನೀರಿನ ತೆರಿಗೆ ಶುಲ್ಕ 21 ಲಕ್ಷ ರೂ., ಮಳಿಗೆಗಳ ಬಾಡಿಗೆ 8.50 ಲಕ್ಷ ರೂ., ಉದ್ದಿಮೆ ಪರವಾನಗಿ 5.50 ಲಕ್ಷ ರೂ., ನೆಲ ಬಾಡಿಗೆಯಿಂದ 5 ಲಕ್ಷ ರೂ. ಸೇರಿದಂತೆ ಇನ್ನಿತರ ಮೂಲಗಳಿಂದ 10.50 ಲಕ್ಷ ರೂ.ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಸರ್ಕಾರದ ಅನುದಾನಗಳಾದ ಎಸ್‌ಎಫ್‌ಸಿ ಅನುದಾನ 25 ಲಕ್ಷ ರೂ., 15ನೇ ಹಣಕಾಸು ಯೋಜನೆ ಅನುದಾನ 60 ಲಕ್ಷ ರೂ., ಎಸ್‌ಎಫ್‌ಸಿ ಅನುದಾನ 1.2 ಕೋಟಿ ರೂ., ಎಸ್‌ಎಫ್‌ಸಿ ವೇತನ ಅನುದಾನ 1.6 ಕೋಟಿ ರೂ., ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ 8 ಲಕ್ಷ ರೂ.ಹಂಚಿಕೆಯಾಗಿದೆ. ಬಜೆಟ್‌ನ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಪಾವತಿಸಲಾಗಿದ್ದು ಈ ಪೈಕಿ ಘನ ತ್ಯಾಜ್ಯ ನಿರ್ವಹಣೆಗೆ 20 ಲಕ್ಷ ರೂ. ಮೀಸಲಿಡಲಾಗಿದೆ. ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 1 ಕೋಟಿ ರೂ., ಹೊರಗುತ್ತಿಗೆ ನೌಕರರ ವೇತನಕ್ಕೆ 55 ಲಕ್ಷ ರೂ., ಬೀದಿ ದೀಪ ನಿರ್ವಹಣೆಗೆ 15 ಲಕ್ಷ ರೂ., ಚರಂಡಿ ನಿರ್ಮಾಣಕ್ಕೆ 50 ಲಕ್ಷ ರೂ., ಪಟ್ಟಣ ಪಂಚಾಯಿತಿ ಕಚೇರಿ ನಿರ್ವಹಣೆಗೆ 10 ಲಕ್ಷ ರೂ., ಪೌರಕಾರ್ಮಿಕರ ಬೆಳಗಿನ ಉಪಾಹಾರಕ್ಕೆ 2.5 ಲಕ್ಷ ರೂ.ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡುವ ಆಸ್ತಿಗಳ ತೆರಿಗೆಯನ್ನು ಹೆಚ್ಚಿಸಲಾಗಿದ್ದು, ಶೇ.3ರಿಂದ ಶೇ.5ರವರೆಗೆ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಅಗತ್ಯ ಕ್ರಮವಹಿಸಲು ತೀರ್ಮಾನಿಸಲಾಯಿತು.

ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಸಣ್ಣತಾಯಮ್ಮ, ಚೈತ್ರಾ ಸ್ವಾಮಿ, ದಿವ್ಯಾ ನವೀನ್, ಚಂದ್ರಕಲಾ ರಾಜಣ್ಣ, ವಿನಾಯಕ ಪ್ರಸಾದ್, ನೂರಾಳಸ್ವಾಮಿ, ಉಮಾ ರಾಮಚಂದ್ರ, ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್‌ಕುಮಾರ್, ರಾಮು, ಪಳನಿಸ್ವಾಮಿ, ಶಿವಪ್ರಸಾದ್, ಅರ್ಜುನ್, ಅರುಣ್‌ಆರಾಧ್ಯ, ಅನಿತಾ ಕುಮಾರಿ, ರಂಜಿನಿ, ದಿಲೀಪ್, ದಿನೇಶ್, ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

-----------

ಸರಗೂರು ಪಟ್ಟಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಜನಪರ ಆಯವ್ಯಯ ಮಂಡಿಸಲಾಗಿದೆ. ಬಜೆಟ್‌ನಲ್ಲಿನ ಕಾಮಗಾರಿಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಬೇಕಿದೆ.

ಶ್ರೀನಿವಾಸ್, ಸದಸ್ಯ, ಸರಗೂರು ಪಟ್ಟಣ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net