17, 18ರಂದು ಕಾವೇರಿ ರಥಯಾತ್ರೆ

Published on

ನಾಪೋಕ್ಲು: ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 26ನೇ ವರ್ಷದ ಕಾವೇರಿ ರಥಯಾತ್ರೆ ಅ.17 ಮತ್ತು 18ರಂದು ಅದ್ದೂರಿಯಾಗಿ ಜರುಗಲಿದೆ ಎಂದು ಸಮಿತಿ ಸಂಚಾಲಕ ಎಂ.ರೋಝಿ ಚಿಣ್ಣಪ್ಪ ತಿಳಿಸಿದರು.


ಪಾಲೂರಿನ ಶ್ರೀಸತ್ಯ ಹರಿಶ್ಚಂದ್ರ ದೇಗುಲದ ಜೀರ್ಣೋದ್ದಾರಕ್ಕಾಗಿ ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಜನ್ಮಸ್ಥಳ ತಲಕಾವೇರಿಯ ಪಾವಿತ್ರೃ ರಕ್ಷಣೆಗಾಗಿ ಕಳೆದ 25 ವರ್ಷಗಳಿಂದ ಕಾವೇರಿ ರಥಯಾತ್ರೆಯನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಗುರುವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.


ಕೊಡಗಿನ ಕುಲದೇವತೆ ಮಾತೆ ಕಾವೇರಿ ಪ್ರತಿಮೆಯ ಪುಷ್ಪಾಲಂಕೃತ ರಥಯಾತ್ರೆಯು ಅ.17ರ ಬೆಳಗ್ಗೆ 9 ಗಂಟೆಗೆ ಪಾಲೂರಿನ ಪಾಲೂರಪ್ಪ ದೇವರ ಸನ್ನಿಧಿಯಿಂದ ಆರಂಭವಾಗಲಿದ್ದು, ಬಳಿಕ ಬೆಟ್ಟಗೇರಿ, ಬಕ್ಕ, ಕಾರುಗುಂದ, ಕೊಟ್ಟೂರು, ಚೇರಂಬಾಣೆ, ತೊಟ್ಲುಕುಂಞ, ಕೋಪಟ್ಟಿ, ಚೆಟ್ಟಿಮಾನಿಗಾಗಿ ಮಧ್ಯಾಹ್ನ 2.30 ಗಂಟೆಗೆ ಭಾಗಮಂಡಲ ತಲುಪಲಿದೆ. ಬಳಿಕ ಈ ಬೃಹತ್ ರಥಯಾತ್ರೆ ತಲಕಾವೇರಿಯ ಪವಿತ್ರ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲಿದೆ. ಅ.18ರಂದು ಬೆಳಗ್ಗೆ 6ಗಂಟೆಗೆ ಭಾಗಮಂಡಲದಿಂದ ರಥಯಾತ್ರೆ ಆರಂಭಗೊಂಡು ತೀರ್ಥಪ್ರಸಾದ ವಿತರಣೆಯೊಂದಿಗೆ ಅಯ್ಯಂಗೇರಿ, ಬಲ್ಲ, ಸಣ್ಣಪುಲಿಕೋಟು, ದೊಡ್ಡಪುಲಿಕೋಟು, ಪೇರೂರು, ಬಲ್ಲಮಾವಟಿ, ನೆಲಜಿ, ಚೋಣಕೆರೆ, ಹಳೇತಾಲೂಕಿಗಾಗಿ ಮಧ್ಯಾಹ್ನ 1 ಗಂಟೆಗೆ ನಾಪೋಕ್ಲು ಪಟ್ಟಣಕ್ಕೆ ಆಗಮಿಸಲಿದ್ದು, ಬಳಿಕ ನಾಪೋಕ್ಲು ಪೇಟೆ ಮಾರ್ಗವಾಗಿ ಐತಿಹಾಸಿಕ ಪಾಲೂರು ಶ್ರೀಸತ್ಯಹರಿಶ್ಚಂದ್ರ ದೇವಾಲಯದ ಕಾವೇರಿ ನದಿಯಲ್ಲಿ ವಿಶೇಷ ಪೂಜೆಗಳೊಂದಿಗೆ ತಾಯಿ ಕಾವೇರಿ ಮಾತೆಯ ಕಳಶ ವಿಸರ್ಜನೆಯೊಂದಿಗೆ ರಥಯಾತ್ರೆ ಅಂತ್ಯಗೊಳ್ಳಲಿದೆ ಎಂದು ರೋಝಿ ಚಿಣ್ಣಪ್ಪ ಮಾಹಿತಿ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮುಯ್ಯು ದೇವಯ್ಯ, ಚೋಕಿರ ಸುಧಿ ಅಪ್ಪಯ್ಯ, ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟಂಡ ಸುಮಿ ದೇವಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net