

ಚಿತ್ರದುರ್ಗ: ನಗರದ ಶ್ರೀ ಹರಿವಾಯು ಗುರು ಸೇವಾ ಟ್ರಸ್ಟ್ ಡಿ.16ರಿಂದ 22ರವರೆಗೆ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಸಂಜೆ 6 ರಿಂದ ಹರಿದಾಸ ಹಬ್ಬ-ಸಪ್ತಾಹ ಹಾಗೂ ಶ್ರೀ ಹರಿವಾಯು ಸ್ತುತಿ ಪಾರಾಯಣದ 24ನೇ ವಾರ್ಷಿಕೋತ್ಸವ ಹಮ್ಮಿಕೊಂಡಿದೆ.
16ರ ಸಂಜೆ 6.30ಕ್ಕೆ ವ್ಯಾಸ ವಿಜ್ಞಾನ ದೀಪ-ದಾಸ ಸುಜ್ಞಾನ ದೀಪದ ಉದ್ಘಾಟನೆಯನ್ನು ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ನೆರವೇರಿಸಲಿದ್ದಾರೆ. ವಿಶೇಷ ಪ್ರಚನಕಾರರಾಗಿ ಬೆಂಗಳೂರಿನ ವಿದ್ವಾನ್ ಶ್ರೀ ಗುರುರಾಜ ದಾಸರು ಪಾಲ್ಗೊಳ್ಳಲಿದ್ದಾರೆ.
ಸಂಸದ ಗೋವಿಂದ ಎಂ. ಕಾರಜೋಳ, ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಾನಾ ಗಣ್ಯರು ಉಪಸ್ಥಿತರಿರುವರು. ನಿತ್ಯ ಸಂಜೆ 6ಕ್ಕೆ ಸಾಮೂಹಿಕ ಶ್ರೀವಿಷ್ಣು ಸಹಸ್ರ ನಾಮ ಸ್ತೋತ್ರ ಪಾರಾಯಣ, 6.30ಕ್ಕೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಭಜನೆ ಹಾಗೂ 7ಕ್ಕೆ ಹರಿದಾಸರು ಕಂಡ ಗುರುರಾಯರು ಕುರಿತಂತೆ ಪ್ರವಚನವಿರುತ್ತದೆ.
ಡಿ.20ರಂದು ಸಂಜೆ 5.30ಕ್ಕೆ ಸೋದೆ ವಾದಿರಾಜ ಮಠದ ಪೀಠಾಧಿಪತಿ ಶ್ರೀ ವಿಶ್ವ ವಲ್ಲಭ ತೀರ್ಥ ಶ್ರೀಪಾದಂಗಳವರ ಶೋಭಾಯಾತ್ರೆ ಆನೆಬಾಗಲಿನಿಂದ ಪ್ರಾರಂಭವಾಗಿ ಗಾಂಧಿ ವೃತ್ತ, ಎಸ್‌ಬಿಐ ವೃತ್ತದ ಮೂಲಕ ವಾಸವಿ ವಿದ್ಯಾಸಂಸ್ಥೆ ಆವರಣ ತಲುಪಲಿದೆ.
ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಡಿ.21ರ ಬೆಳಗ್ಗೆ 5.30ರಿಂದ ಶ್ರೀ ಹರಿವಾಯುಸ್ತುತಿಪುನಃಶ್ಚರಣ ಹೋಮ, ಸಂಜೆ 7ರಿಂದ ಪ್ರವಚನ ಮಂಗಳ ಮಹೋತ್ಸವ, 8ರಿಂದ ಸಂಸ್ಥಾನದ ತೊಟ್ಟಿಲು ಪೂಜೆ ಹಾಗೂ ವಿದ್ಯಾಸಂಸ್ಥೆ ಆವರಣದಲ್ಲಿ ಶ್ರೀ ಭೂತರಾಜರ ವಿಶೇಷ ಪೂಜಾ ಕಾರ್ಯಕ್ರಮ ರುತ್ತದೆ ಎಂದು ಪ್ರಕಟಣೆ ತಿಳಿಸಿದೆ.