16ಕ್ಕೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ

07Tmk_DCC_Bank_Election
Published on

ತುಮಕೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಚುನಾವಣಾ ಕಣ ರಂಗೇರಿದೆ. ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೋಮವಾರ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿನ ‘ಅಧಿಪತ್ಯ’ ಮುಂದುವರಿಸಿದರು.

ನಿರ್ದೇಶಕ ಮಂಡಳಿಯ 14 ಸ್ಥಾನಗಳಿಗೆ ಸೆ.16 ರಂದು ಚುನಾವಣೆ ನಡೆಯಲಿದ್ದು ಸೆ.1ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಸೋಮವಾರ ಕೆ.ಎನ್.ರಾಜಣ್ಣ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಕ್ಯಾತಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದಿಂದ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಕೆ.ಷಡಕ್ಷರಿ ತಿಪಟೂರಿನಿಂದ ಸಲ್ಲಿಸಿದರು.

ಕೆಎನ್ನಾರ್ ಪುತ್ರ ಕಣಕ್ಕೆ: ಕೆಎನ್ನಾರ್ ಪುತ್ರ ಆರ್.ರಾಜೇಂದ್ರ ಸಹ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮೂಲಕ ಅಪ್ಪ, ಮಗ ಇಬ್ಬರು ಪುನರಾಯ್ಕೆ ಬಯಸಿದ್ದಾರೆ. ತುಮಕೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಿಂದ ರಾಜೇಂದ್ರ ನಾಮಪತ್ರ ಸಲ್ಲಿಸಿದರು.

ರಾಜಣ್ಣ ಬೆಂಬಲಿಗರಾದ ಜಿಪಂ ಸದಸ್ಯ ಜಿ.ಜೆ.ರಾಜಣ್ಣ ಮಧುಗಿರಿ ಕ್ಷೇತ್ರದಿಂದ, ಶಿರಾ ತಾಲೂಕಿನಿಂದ ಜಿ.ಎನ್.ಮೂರ್ತಿ, ಪಾವಗಡದಿಂದ ನರಸಿಂಹಯ್ಯ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ನಾಗೇಶ್‌ಬಾಬು ನಾಮಪತ್ರ ಸಲ್ಲಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿನ ರಾಜಣ್ಣ ಹಿಡಿತ ಮತ್ತೊಮ್ಮೆ ಸಾಬೀತಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಎಸ್.ಆರ್.ರಾಜಕುಮಾರ್ ಸಹ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದಿನ ನಿರ್ದೇಶಕ ಮಂಡಳಿಯ ಬಹುತೇಕ ಸದಸ್ಯರು ಚುನಾವಣಾ ಕಣಕ್ಕಿಳಿದಿದ್ದಾರೆ.

20 ನಾಮಪತ್ರ ಸಲ್ಲಿಕೆ : ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ 14 ಸ್ಥಾನಗಳಿಗೆ ಈವರೆಗೆ ಒಟ್ಟು 20 ನಾಮಪತ್ರ ಸಲ್ಲಿಕೆಯಾಗಿವೆ. ಮಂಗಳವಾರ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ‘ಎ’ ವರ್ಗದಿಂದ 16 ನಾಮಪತ್ರ, ಬಿ ಹಾಗೂ ಸಿ ವರ್ಗದಿಂದ ತಲಾ 1, ಡಿ ವರ್ಗದಿಂದ 1 ಹಾಗೂ ಡಿ1 (ಮಹಿಳಾ) ವರ್ಗದಿಂದ 1 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಅಜಯ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು. ಸೆ.9 ರಂದು ನಾಮಪತ್ರ ಪರೀಶೀಲನೆ ನಡೆಯಲಿದ್ದು 10 ರಂದು ನಾಮಪತ್ರ ಹಿಂಪಡೆಯಲು ಅವಕಾಶ ಇರಲಿದೆ. ಅವಕಾಶ ಬಿದ್ದಲ್ಲಿ ಸೆ.16 ರಂದು ಚುನಾವಣೆ ನಡೆಸಲಾಗುವುದು.

ಕೊಂಡವಾಡಿ, ಶಾಸಕ ಶ್ರೀನಿವಾಸ್ ಸ್ಪರ್ಧೆ ಇಲ್ಲ?: ಕಳೆದ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿದ್ದ ಮಾಜಿ ಸಚಿವ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಈ ಬಾರಿ ಹಿಂದೆ ಸರಿದಿದ್ದಾರೆ. ರಾಜಣ್ಣ ಜತೆಗೆ ಅಂತರ ಕಾಯ್ದುಕೊಂಡಿರುವ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಕೂಡ ಸ್ಪರ್ಧೆಗಿಳಿಯಲು ಮನಸ್ಸು ಮಾಡಿಲ್ಲ. 2003 ರಿಂದ ಡಿಸಿಸಿ ಬ್ಯಾಂಕ್ ಅನ್ನು ಹಿಡಿತದಲ್ಲಿಟ್ಟುಕೊಂಡಿರುವ ಕೆ.ಎನ್.ರಾಜಣ್ಣಗೆ ಸಹಕಾರಿ ಕ್ಷೇತ್ರದಲ್ಲಿ ಯಾರೂ ಸೆಡ್ಡು ಹೊಡೆಯುವರೇ ಇಲ್ಲವಾಗಿದ್ದು, ಸತತ 6ನೇ ಬಾರಿ ಅಧ್ಯಕ್ಷರಾಗುವ ಹಾದಿ ಬಹುತೇಕ ಸುಗಮವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net