

ಕೊಪ್ಪ: ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಹರಪುರದ ಶ್ರೀಹರ್ಷ ಅವರ ತೋಟದ ಸಮೀಪ ವೀರಗಲ್ಲು ಪತ್ತೆಯಾಗಿದೆ.
ಸ್ಮಾರಕ ಶಿಲ್ಪದ ಮಾಹಿತಿಯ ಬಗ್ಗೆ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಮಾಹಿತಿ ನೀಡಿ, ಈ ವೀರಗಲ್ಲು ಸುಮಾರು 15-16ನೇ ಶತಮಾನಕ್ಕೆ ಸೇರಿರಬಹುದು ಎಂದು ಅಂದಾಜಿಸಿದ್ದಾರೆ. ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಈ ವೀರಗಲ್ಲು 5 ಅಡಿ ಎತ್ತರ 2 ಅಡಿ ಅಗಲವಾಗಿದ್ದು, ನಾಲ್ಕು ಪಟ್ಟಿಕೆಗಳನ್ನು ಹೊಂದಿದೆ. ಈ ವೀರಗಲ್ಲಿನ ವಿಶೇಷತೆ ಎಂದರೆ ಒಂದೇ ವೀರಗಲ್ಲಿನಲ್ಲಿ ಇಬ್ಬರು ವೀರರು ಯುದ್ಧದಲ್ಲಿ ಹೋರಾಡಿ ಮಡಿದ ಕೆತ್ತನೆಯನ್ನು ಕಾಣಬಹುದಾಗಿದೆ.
ಮೊದಲ ಪಟ್ಟಿಕೆಯಲ್ಲಿ ವೀರರಿಬ್ಬರು ಕತ್ತಿ ಗುರಾಣಿ ಹಾಗೂ ಬಿಲ್ಲು ಬಾಣದ ಮೂಲಕ ಹೋರಾಟ ಮಾಡುವ ದೃಶ್ಯವಿದ್ದರೆ, ಎರಡನೇ ಪಟ್ಟಿಕೆಯಲ್ಲಿ ಅಶ್ವದ ಮೇಲೆ ಕುಳಿತು ವೀರರು ಹೋರಾಟ ಮಾಡುವ ದೃಶ್ಯವಿದೆ. ನಂತರದ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಹೋರಾಡಿ ಮರಣ ಹೊಂದಿದ ಈ ಇಬ್ಬರು ವೀರರನ್ನು ಎರಡು ಪ್ರತ್ಯೇಕ ಎರಡು ಪಲ್ಲಕ್ಕಿಯಲ್ಲಿ ಕೂರಿಸಿ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಶಿಲ್ಪಗಳನ್ನು ಕೆತ್ತಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಗಜಗಳು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಕೆತ್ತನೆ ಕಾಣಬಹುದಾಗಿದೆ. ಮೇಲ್ಭಾಗದಲ್ಲಿ ಕೀರ್ತಿಮುಖದ ಜತೆಗೆ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಕೆತ್ತನೆ ಮಾಡಲಾಗಿದೆ. ಅಧ್ಯಯನ ದೃಷ್ಟಿಯಿಂದ ಈ ವೀರಗಲ್ಲು ಪ್ರಮುಖವಾದ ಮಾಹಿತಿ ನೀಡುತ್ತದೆ ಎಂದು ತಿಳಿಸಿದ್ದಾರೆ.
ಭೂಮಿಯಲ್ಲಿ ಹೂತು ಹೋಗಿದ್ದ ಈ ವೀರಗಲ್ಲಿನ ಸಂರಕ್ಷಣೆ ಮಾಡುವಲ್ಲಿ ಶ್ರೀಹರ್ಷ, ಮಹೇಶ್ ಶಿಲ್ಪಿ, ಶೇಷಪ್ಪ, ಹರಿಹರಪುರದ ಸುರೇಶ್ ಮತ್ತು ಅಭಯ್ ಸಹಕಾರ ನೀಡಿದ್ದಾರೆ.