ಕಲಾಭ್ಯಾಸದಿಂದ ಶಿಸ್ತು ಸಂಸ್ಕಾರ ಸದೃಢ : ಸಚ್ಚಿದಾನಂದ ಭಾರತಿ ಸ್ವಾಮೀಜಿ ಅಭಿಮತ

New Project (33)
Published on

ವಿಜಯವಾಣಿ ಸುದ್ದಿಜಾಲ ಕಟೀಲು

ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಯಕ್ಷಗಾನಕ್ಕೆ ಅವಿನಾಭಾವ ಸಂಬಂಧ. ಕಲೆಯ ಅಭ್ಯಾಸದಿಂದ ಮಕ್ಕಳಲ್ಲಿ ಶಿಸ್ತು ಸಂಸ್ಕಾರ ಸದೃಢವಾಗಿ ಬೇರೂರುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ಕಟೀಲು ಸರಸ್ವತೀ ಸದನದಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳದ 16ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕಲಾವಿದ ವಿಶ್ವೇಶ್ವರ ಭಟ್ ಅವರಿಗೆ ದುರ್ಗಾ ಮಕ್ಕಳ ಮೇಳ ಪ್ರಶಸ್ತಿ, ಹಿಮ್ಮೇಳ ವಾದಕ ರಾಮ್ ಪ್ರಕಾಶ್ ಕಲ್ಲೂರಾಯರಿಗೆ ಶ್ರೀನಿಧಿ ಅಸ್ರಣ್ಣ ಪ್ರಶಸ್ತಿ ಪ್ರದಾನಿಸಲಾಯಿತು. ಸಿ.ಎ. ವಿದ್ಯಾರ್ಥಿ ಕೆ.ಕೆ.ಎಸ್. ಗಣೇಶ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರಮುಖರಾದ ಬೋಡಾಲ ಸಚ್ಚಿದಾನಂದ ಶೆಟ್ಟಿ, ರಾವೇಂದ್ರ ಆಚಾರ್ಯ ಬಜಪೆ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ್ ಆಸ್ರಣ್ಣ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ಉದ್ಯಮಿ ಜಯರಾಮ ಶೆಟ್ಟಿ, ಖಾಸಗಿ ವಾಹಿನಿ ವಾಲೀಕ ಲೀಲಾಕ್ಷ ಕರ್ಕೇರ, ಕಟೀಲು ಪ್ರೌಢಶಾಲೆಯ ಮುಖ್ಯಶಿಕ್ಷಕ ಗಿರೀಶ್ ತಂತ್ರಿ, ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಚಂದ್ರಶೇಖರ ಭಟ್ ಮತ್ತಿತರರಿದ್ದರು.

ಸಂಸ್ಥೆಯ ಅಧ್ಯಕ್ಷ ಹರಿನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು. ವಾಸುದೇವ ಶೆಣೈ ನಿರೂಪಿಸಿದರು. ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ ಪ್ರಸಂಗಗಳು, ವಿವಿಧ ಒಡ್ಡೋಲಗಗಳು, ಪೂರ್ವರಂಗದ ವಿವಿಧ ಕುಣಿತಗಳು ಪ್ರದರ್ಶಿತವಾದವು.

ಶಾಲಾ ಪಠ್ಯಪುಸ್ತಕದಲ್ಲಿ ಪುರಾಣದ ವಿಷಯಗಳು ಕಡಿಮೆಯಾಗುತ್ತಿದೆ. ಇಂತಹ ಕಾಲದಲ್ಲಿ ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವಂತಾಗಬೇಕು. ಹಿಂದಿನ ದಿನಗಳಲ್ಲಿ ಚೌಕಿಗೆ ಬಂದು ಮಕ್ಕಳು ಆಸಕ್ತಿಯಿಂದ ನೋಡುತ್ತಿದ್ದರು. ಆದರೆ ಇಂದು ಮಕ್ಕಳಲ್ಲಿ ಆಸಕ್ತಿ ಕಡಿಮೆಯಾಗಿದ್ದು, ಶ್ರೀ ದುರ್ಗಾ ಮಕ್ಕಳ ಮೇಳ ಮಕ್ಕಳಿಗೆ ಯಕ್ಷಗಾನ ಕಲಿಸುವ ಮೂಲಕ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ.

ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಎಡನೀರು ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net