

ಬೆಳಗಾವಿ: ರಾಜ್ಯದಲ್ಲಿ ಅತೀ ಹೆಚ್ಚು ಕೃಷಿ ಪ್ರದೇಶ ಹೊಂದಿರುವ, ಹಾಗೂ 1.2 ಲಕ್ಷಕ್ಕೂ ಅಧಿಕ ರೈತರಿರುವ ಜಿಲ್ಲೆ ಬೆಳಗಾವಿ. ಆದರೆ, ಜಿಲ್ಲೆಯಲ್ಲಿ 2020- 21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಕಟ್ಟಿದ್ದು ಕೇವಲ 1,698 ರೈತರು ಮಾತ್ರ..!
ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ವರ್ಷ ಕಳೆದರೂ ಪರಿಹಾರ ಬಂದಿಲ್ಲ. ಅಲ್ಲದೆ, ಲಾಕ್ ಡೌನ್ ಸಂದರ್ಭದಲ್ಲಿ ಬೆಳೆಗಳು ಮಾರಾಟವಾಗದೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಹೀಗಾಗಿ ಇದೀಗ ಮುಂಗಾರು ಹಂಗಾಮಿನಲ್ಲಿ ಫಸಲ್ ಬಿಮಾ ವಿಮೆ ಹಣ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.
2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ 5.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ಸಜ್ಜೆ, ಹೆಸರು, ತೊಗರಿ, ಬಿಳಿಜೋಳ, ಕಡಲೆ, ಗೋಧಿ ಸೇರಿ ವಿವಿಧ ಬೆಳೆ ಬಿತ್ತನೆ ಮಾಡಿದ್ದರು. ಇದರಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಕೆಲ ಬೆಳೆಗಳು ರೈತರ ಕೈ ಸೇರಿದರೆ, ಇನ್ನೂ ಕೆಲ ಬೆಳೆಗಳು ಧಾರಾಕಾರ ಮಳೆಯಿಂದ ಕಟಾವು ಮಾಡಲು ಸಾಧ್ಯವಾಗದೆ ಕೊಳತು ಗೊಬ್ಬರವಾದವು. ಬಿತ್ತನೆಗಾಗಿ ಮಾಡಿದ ಸಾಲ ಮರು ಪಾವತಿಸಲು ಸಾಧ್ಯವಾಗದೆ ರೈತರು ಆರ್ಥಿಕ ನಷ್ಟ ಅನುಭವಿಸಿದರು.
ಪ್ರೀಮಿಯಂ ಕಟ್ಟದಿರಲು ನಿರ್ಧಾರ: ಕಳೆದ ವರ್ಷ ಮುಂಗಾರಿನಲ್ಲಿ -29,751 ರೈತರು ಮತ್ತು ಹಿಂಗಾರು ಹಂಗಾಮಿನಲ್ಲಿ- 27,786 ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಕಟ್ಟಿದ್ದರು. ಆದರೆ, ಅತಿವೃಷ್ಟಿಯಿಂದ ಉಂಟಾದ ಬೆಳೆಗಳಿಗೆ ವಿಮಾ ಕಂಪನಿಗಳಿಂದ ಪರಿಹಾರ ಹಣ ಬಂದಿಲ್ಲ. ಮತ್ತೊಂದೆಡೆ ಸರ್ಕಾರದಿಂದ ಬೆಳೆಹಾನಿ ಪರಿಹಾರವೂ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ವಿಮೆ ಕಟ್ಟುವಂತೆ ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ವಿಮೆ ಕಟ್ಟವುದರಿಂದ ವಿಮೆ ಕಂಪನಿಗಳಿಗೆ ವಾರ್ಷಿಕ ಕೋಟ್ಯಂತರ ರೂ. ಲಾಭವಾಗುತ್ತಿದೆಯೇ ಹೊರತು ನಮಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಪ್ರೀಮಿಯಂ ಕಟ್ಟುವುದು ಬೇಡವೆಂದು ನಿರ್ಧರಿಸಿದ್ದೇವೆ ಎಂದು ರಾಮದುರ್ಗ, ಸವದತ್ತಿ ಮತ್ತು ಮೂಡಲಗಿ ತಾಲೂಕಿನ ರೈತರು ದೂರಿದ್ದಾರೆ.
| ಮಂಜುನಾಥ ಕೋಳಿಗುಡ್ಡ