

ಆನೇಕಲ್ : ಅಪಾರ್ಟ್ಮೆಂಟ್ನಲ್ಲಿ ಕೆಜಿಗಟ್ಟಲೆ ಗಾಂಜಾ ಇಟ್ಟುಕೊಂಡಿದ್ದ ಆರೋಪಿ ಆನೇಕಲ್ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯಿಂದ 169 ಕೆಜಿ ಗಾಂಜಾ, ಅರ್ಧ ಕೆಜಿಯಷ್ಟು ಹೈಡ್ರೋ ಗಾಂಜಾ ಮತ್ತು 800 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಕೇರಳ ಮೂಲದ ಸಚಿನ್ (32) ಬಂಧಿತ ಆರೋಪಿ. ರಾಶಿ, ಸಂಜು ಮತ್ತು ಉಮೇದ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?: -ಕರ್ಪೂರಿನಲ್ಲಿರುವ ಅಪಾರ್ಟ್ಮೆಂಟ್ ಸಿಬ್ಬಂದಿ ಪ್ಲಾಟ್ಗಳ ನಿರ್ವಹಣೆಗಾಗಿ ತಪಾಸಣೆ ನಡೆಸುತ್ತಿದ್ದ ವೇಳೆ ಪ್ಲಾಟ್ ಒಂದರಲ್ಲಿ ವಾಸವಿದ್ದ ನಾಲ್ವರು ಮೊದಲ ಮಹಡಿಯಿಂದ ಹಾರಿ ಪರಾರಿಯಾಗಲು ಯತ್ನಿಸಿದ್ದಾರೆ.
ಅನುಮಾನಗೊಂಡ ಸಿಬ್ಬಂದಿ ಪ್ಲಾಟ್ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಎರಡನೇ ಮಹಡಿ 109 ಪ್ಲಾಟ್ನಲ್ಲಿದ್ದ ನಾಲ್ವರು ಮೊದಲ ಮಹಡಿಯಿಂದ ಜಂಪ್ ಮಾಡಿದ್ದಾರೆ. ಇದರಲ್ಲಿ ಸಚಿನ್ ಕಾಲು ಮುರಿದುಕೊಂಡು ಕುಸಿದು ಬಿದ್ದರೆ ಉಳಿದ ಮೂವರು ಪರಾರಿ ಆಗಿದ್ದಾರೆ. ಸಿಬ್ಬಂದಿ ಆರೋಪಿ ಸಚಿನ್ನನ್ನು ಪ್ರಶ್ನಿಸಿದಾಗ ವಿಷಯ ತಿಳಿದುಬಂದಿದೆ. ಆರೋಪಿಗಳ ಕಾರು ಮತ್ತು ಪ್ಲಾಟ್ ಪರಿಶೀಲಿಸಿದ ಸಿಬ್ಬಂದಿ ದಂಗಾಗಿದ್ದಾರೆ. ಅಪಾರ್ಟ್ ಮೆಂಟ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ತಿಪ್ಪೇಸ್ವಾಮಿ ಹಾಗೂ ತಂಡ ಆರೋಪಿಯನ್ನು ಬಂಧಿಸಿ ಕಾರು ಹಾಗೂ ವಾಹನವನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.
ಪ್ಲಾಟ್ನಿಂದಲೇ ಡೀಲ್ : ಪ್ಲಾಟ್ನಲ್ಲಿ 45 ದಿನಗಳಿಂದ ನಾಲ್ವರು ಆರೋಪಿಗಳು ವಾಸವಿದ್ದು, ಒಡಿಶಾ ಸೇರಿ ಹೊರರಾಜ್ಯಗಳಿಂದ ಗಾಂಜಾ ತರಿಸುತ್ತಿದ್ದರು ಎನ್ನಲಾಗಿದೆ, ಪ್ಲಾಟ್ನಲ್ಲಿ ಸಣ್ಣ ಸಣ್ಣ ಪ್ಯಾಕೆಟ್ಗಳಾಗಿ ಪ್ಯಾಕಿಂಗ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇಡೀ ಪ್ರಕರಣವನ್ನು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ನಾಗರಾಜ್ ಮತ್ತು ತಂಡಕ್ಕೆ ವಹಿಸಿದ್ದು, ದಂಧೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶಿಕ್ಷಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.