

ಭಟ್ಕಳ: ಆಟೋವೊಂದರಲ್ಲಿ ಅಕ್ರಮವಾಗಿ 168 ಕೆಜಿ ದನ ಮಾಂಸ ಸಾಗಿಸುತ್ತಿದ್ದ ವೇಳೆ ಭಟ್ಕಳ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಆಟೋ ವಶಕ್ಕೆ ಪಡೆದ ಘಟನೆ ಆಸರಕೇರಿ ಕೆರೆಗದ್ದೆ ಮಹಾಸತಿ ದೇವಸ್ಥಾನ ಸಮೀಪ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಎ.ಡಿ. ಅಶ್ಪಾಕ್, ಶಾಹೀದ್, ಶಾಕೀರ್ ಮಹಮ್ಮದ್ ಪರಾರಿಯಾದ ಆರೋಪಿಗಳು. ಇವರೆಲ್ಲರೂ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ದನಗಳನ್ನು ಕಳುವು ಮಾಡಿಕೊಂಡು ಬಂದು ಅವುಗಳನ್ನು ಕಟಾವು ಮಾಡಿಸಿ ಸುಮಾರು 67,280 ರೂಪಾಯಿ ಮೌಲ್ಯದ 168 ಕೆ.ಜಿ 200 ಗ್ರಾಂ. ಮಾಂಸವನ್ನು 5 ಸಿಮೆಂಟ್ ಚೀಲಗಳಲ್ಲಿ ತುಂಬಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ 11.30ಕ್ಕೆ ಭಟ್ಕಳ ನಗರ ಠಾಣೆಯ ಪಿಎಸ್ಐ ತಿಮ್ಮಪ್ಪ ಎಸ್. ಅವರು ಆಸರಕೇರಿ ಕೆರೆಗದ್ದೆ ಮಹಾಸತಿ ದೇವಸ್ಥಾನದ ಸಮೀಪ ದಾಳಿ ಮಾಡಿದ ವೇಳೆ ಆರೋಪಿಗಳು ಆಟೋರಿಕ್ಷಾ ಹಾಗೂ ಮಾಂಸವನ್ನು ಬಿಟ್ಟು ಪರಾರಿಯಾಗಿದ್ದಾರೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಠಾಣೆ ಪಿಎಸ್ಐ ಸೋಮರಾಜ ರಾಠೋಡ ತನಿಖೆ ಕೈಗೊಂಡಿದ್ದಾರೆ.