ಜಿಲ್ಲಾ ಆಸ್ಪತ್ರೆಯಿಂದ 165 ಮಂದಿ ಬಿಡುಗಡೆ

16 brraguru 6
Published on

ತುಮಕೂರು: ಜಿಲ್ಲೆಯಲ್ಲಿ ಭಾನುವಾರ 109 ಹೊಸ ಕರೊನಾ ಪ್ರಕರಣ ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಈವರೆಗಿನ ಸೋಂಕಿತರ ಸಂಖ್ಯೆ 3420ಕ್ಕೇರಿಕೆಯಾಗಿದೆ. ತುಮಕೂರು ತಾಲೂಕಿನಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಒಂದೇ ದಿನ 38 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈವರೆಗೆ ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 1296ಕ್ಕೆ ಮುಟ್ಟಿದೆ. ಪಾವಗಡ 7, ಗುಬ್ಬಿ 6, ತುರುವೇಕೆರೆ 22, ತಿಪಟೂರು 13, ಶಿರಾ 8, ಕುಣಿಗಲ್ 3, ಕೊರಟಗೆರೆ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಧುಗಿರಿ 2 ಪ್ರಕರಣಗಳಾಗಿದ್ದರೆ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಸಂಖ್ಯೆ ಶೂನ್ಯವಾಗಿದೆ.

ಜಿಲ್ಲೆಯಲ್ಲಿ ಕರೊನಾ ಮತ್ತೆ ಇಬ್ಬರನ್ನು ಬಲಿ ಪಡೆದಿದೆ. ತುಮಕೂರು ಹಾಗೂ ಹಾಗೂ ಪಾವಗಡ ತಾಲೂಕಿನ ತಲಾ ಓರ್ವರು ಭಾನುವಾರ ಮೃತಪಟ್ಟಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 103ಕ್ಕೇರಿದೆ. ತುಮಕೂರಿನ ಸಂತೆಪೇಟೆಯ 29 ವರ್ಷದ ಮಹಿಳೆ ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ, ಪಾವಗಡ ತಾಲೂಕು ಶೈಲಾಪುರದ 35 ವರ್ಷದ ಮಹಿಳೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತಪಟ್ಟ ಇಬ್ಬರು 35 ವರ್ಷದೊಳಗಿನವರು ಎಂಬುದು ಸ್ವಲ್ಪ ಭಯ ಮೂಡಿಸಿದೆ. ಇನ್ನೂ ಭಾನುವಾರ ಸೋಂಕು ಪತ್ತೆಯಾದವರಲ್ಲಿ 65 ಪುರುಷರು, 44 ಮಹಿಳೆಯರಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 22 ಜನರಿದ್ದಾರೆ. ಇವರ ಪ್ರಾಥಮಿಕ ಸಂಪರ್ಕದಲ್ಲಿರುವ 143 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 16 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದ್ದು, ಗಂಟಲು ದ್ರವ ಪರೀಕ್ಷೆ ನಡೆಸಲು ಕ್ರಮವಹಿಸಿದೆ.

ಓಡಾಡದಂತೆ ಮಾರ್ಗಸೂಚಿ:ಭಾನುವಾರ 109 ಜನರಲ್ಲಿ ಸೋಂಕು ಪತ್ತೆಯಾಗಿದೆಯಾದರೂ ರೋಗ ಲಕ್ಷಣವಿಲ್ಲದವರು 63 ಜನರಿದ್ದಾರೆ. 46 ಜನರಿಗಷ್ಟೇ ಸಣ್ಣಪುಟ್ಟ ಲಕ್ಷಣಗಳಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 10 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದೆ. ಭಾನುವಾರ 165 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿರುವುದು ನೆಮ್ಮದಿ ಮೂಡಿಸಿದೆ. ತುಮಕೂರು ತಾಲೂಕಿನಲ್ಲಿಯೇ 101 ಜನರ ಆಸ್ಪತ್ರೆಯಿಂದ ಹೊರಬಂದಿದ್ದಾರೆ, ಪ್ರಸ್ತುತ ಜಿಲ್ಲೆಯಲ್ಲಿ 958 ಸಕ್ರಿಯ ಪ್ರಕರಣಗಳಿದ್ದು 2359 ಜನರು ಆಸ್ಪತ್ರೆಯಿಂದ ಮನೆಗೆ ವಾಪಸಾಗಿದ್ದಾರೆ. ಒಮ್ಮೆ ಗುಣಮುಖರಾದವರಿಗೆ ಮತ್ತೆ ಕರೊನಾ ಬರುವುದಿಲ್ಲ ಎನ್ನುವಂತಿಲ್ಲವಾದ್ದರಿಂದ ಎಲ್ಲರೂ ಮನೆಯಿಂದ ಹೊರಗೆ ಓಡಾಡದೇ ಸರ್ಕಾರದ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net