16,350 ಕ್ಯೂಸೆಕ್ ನೀರು ಹೊರಕ್ಕೆ

barrage
Published on

ಮುಂಡರಗಿ: ಮಲೆನಾಡಿನ ವಿವಿಧೆಡೆ ಮಳೆ ಸುರಿಯುತ್ತಿರುವುದರಿಂದ ಗಾಜನೂರು ತುಂಗಾ ಡ್ಯಾಮ್‌ನಿಂದ ನೀರು ಹರಿಬಿಡಲಾಗುತ್ತಿದ್ದು, ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ತಾಲೂಕಿನ ಹಮ್ಮಿಗಿ ಬಳಿಯ ಸಿಂಗಟಾಲೂರು ಬ್ಯಾರೇಜ್‌ನ 26 ಗೇಟ್‌ಗಳ ಪೈಕಿ 6 ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಸಿಂಗಟಾಲೂರು ಬ್ಯಾರೇಜ್‌ನಿಂದ ಜು. 9ರಂದು 16,350 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಹರಿಬಿಡಲಾಗಿದೆ. ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಬ್ಯಾರೇಜ್ ಹಿನ್ನೀರಿನಿಂದ ಗುಮ್ಮಗೋಳ, ಬಿದರಹಳ್ಳಿ, ವಿಠಲಾಪುರ ಮತ್ತು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿವೆ.

ನಾಲ್ಕು ಗ್ರಾಮಗಳನ್ನು ಇದುವರೆಗೂ ಸಂಪೂರ್ಣವಾಗಿ ಸ್ಥಳಾಂತರಿಸದ ಕಾರಣ ಬ್ಯಾರೇಜ್‌ನಲ್ಲಿ 1.85 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಸದ್ಯ 16,350 ಕ್ಯೂಸೆಕ್ ಒಳಹರಿವು ಇದ್ದು, ಒಳಹರಿವು ಇರುವಂತಹ ನೀರನ್ನು ಹೊರಬಿಡಲಾಗುತ್ತಿದೆ.
ಸಿಂಗಟಾಲೂರ ಬ್ಯಾರೇಜ್‌ಗೆ 1.50 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬಂದರೆ ಮುಳುಗಡೆ ಪ್ರದೇಶಕ್ಕೆ ಒಳಪಡುವ ನಾಲ್ಕು ಗ್ರಾಮಗಳಿಗೆ ಪ್ರವಾಹ ಸಮಸ್ಯೆ ಎದುರಾಗಲಿದೆ.

1.50 ಲಕ್ಷದಿಂದ 2.50 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದು ಬಂದಾಗ ಬ್ಯಾರೇಜ್‌ನ 26 ಗೇಟ್‌ಗಳನ್ನು ಸಂಪೂರ್ಣವಾಗಿ ತೆರೆದಾಗಲೂ ಮುಳುಗಡೆ ಗ್ರಾಮಗಳಿಗೆ ಪ್ರವಾಹ ಸಮಸ್ಯೆ ಎದುರಾಗುತ್ತದೆ. ತುಂಗಭದ್ರಾ ನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಮುಳುಗಡೆ ಪ್ರದೇಶದ ಗ್ರಾಮಗಳಲ್ಲಿ ಮತ್ತು ನದಿ ಪಾತ್ರದ ಹಲವು ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ.

ಮಲೆನಾಡಿನ ವಿವಿಧ ಕಡೆಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ಗಾಜನೂರು ತುಂಗಾ ಡ್ಯಾಮ್‌ನಿಂದ ನೀರು ಹರಿಬಿಡಲಾಗುತ್ತಿದೆ. ಹೀಗಾಗಿ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜು.9ರಂದು 16,350ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಸದ್ಯ ಬ್ಯಾರೇಜ್‌ನಲ್ಲಿ 1.85ಟಿಎಂಸಿ ನೀರು ಸಂಗ್ರಹಿಸಲಾಗುತ್ತಿದ್ದು, ಹೆಚ್ಚುವರಿಗೆ ನೀರನ್ನು ಗೇಟ್‌ಗಳ ಮೂಲಕ ನದಿಗೆ ಬಿಡಲಾಗುತ್ತದೆ.ರಾಘವೇಂದ್ರ ಎಚ್.ಸಿ. ಸಿಂಗಟಾಲೂರು ಬ್ಯಾರೇಜ್ ಎಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net