ವಿಜಯಪುರ ಜಿಲ್ಲೆಯಲ್ಲಿ 163 ಕೂಸಿನ ಮನೆ ಪ್ರಾರಂಭ

KUSINA MANE INDI
ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾದ ಕೂಸಿನ ಮನೆಯನ್ನು ಜಿಪಂ ಸಿಇಒ ರಿಶಿ ಆನಂದ ವೀಕ್ಷಿಸಿದರು. ಸಿ.ಆರ್. ಮುಂಡರಗಿ, ನೀಲಗಂಗಾ ಬಬಲಾದ, ಸಂಜಯ ಖಡಗೇಕರ ಮತ್ತಿತರರಿದ್ದಾರೆ.
Published on

ವಿಜಯಪುರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲು ಜಿಲ್ಲೆಯಲ್ಲಿ 163 ಕೂಸಿನ ಮನೆಗಳನ್ನು ಪ್ರಾರಂಭ ಮಾಡಲಾಗಿದೆ. ಅದೇ ರೀತಿ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕೂಸಿನ ಮನೆ ಪ್ರಾರಂಭಿಸಲಾಗಿದೆ. ಎಲ್ಲರೂ ನಿಮ್ಮ ಮೂರು ವಷರ್ದ ಒಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ನರೇಗಾ ಕೆಲಸ ಮಾಡಬಹುದು ಎಂದು ಜಿಪಂ ಸಿಇಒ ರಿಶಿ ಆನಂದ ಹೇಳಿದರು.

ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿಗೆ ಶುಕ್ರವಾರ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಕೂಸಿನ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಆರೈಕೆ ಮಾಡಲು ಪ್ರತ್ಯೇಕವಾಗಿ ಆರೈಕೆದಾರರನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ ಮಕ್ಕಳಿಗೆ ಆಟ-ಪಾಠ, ಪಾಲನೆ-ಪೋಷಣೆ, ವೈಯಕ್ತಿಕ ಸ್ವಚ್ಛತೆ ಕಡೆಗೆ ವಿಶೇಷ ಗಮನ ನೀಡುತ್ತಾರೆ. ಕಾರ್ಮಿಕರು ನಿರ್ಭೀತಿಯಿಂದ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು ಎಂದರು.

ನರೇಗಾದಡಿ ಹೆಚ್ಚು ಕೆಲಸ ನಿರ್ವಹಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಿ, ಪ್ರತಿದಿನ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಕೂಲಿ ರೂ. 349 ಇದೆ. ಎಲ್ಲರೂ ಈ ಸೌಲಭ್ಯವನ್ನು ಪಡೆದು ಅಭಿವೃದ್ಧಿಯತ್ತ ಸಾಗಬೇಕು. ಹಾಗೆಯೇ ವಿಶೇಷ ಚೇತನರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ನರೇಗಾ ಯೋಜನೆಯ ಕೆಲಸದಲ್ಲಿ ಶೇ.50 ರಷ್ಟು ರಿಯಾಯತಿ ನೀಡಲಾಗಿದೆ. ಆದ್ದರಿಂದ ಎಲ್ಲರೂ ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ನಂತರ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಪುಸ್ತಕಗಳು ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ, ಗ್ರಂಥಾಲಯದ ಮುಂಭಾಗದಲ್ಲಿ ಖಾಲಿ ಜಾಗೆಯಲ್ಲಿ ವಿವಿಧ ರೀತಿಯ ಸಸಿಗಳನ್ನು ಬೆಳೆಸಿ ಉದ್ಯಾನವನ ನಿರ್ಮಾಣ ಮಾಡಿ ಮುಕ್ತ ಗ್ರಂಥಾಲಯ ಮಾಡಲು ಸೂಚಿಸಿದರು.

ಈ ವೇಳೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಸಿನ ಮನೆ ಎಂಬ ಶೀರ್ಷಿಕೆಯಡಿ ಪ್ರಾರಂಭವಾಗಿರುವ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಕೂಸಿನ ಮನೆ ಕಟ್ಟಡ ಹಾಗೂ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಇದೇ ವೇಳೆ ಮಕ್ಕಳ ಹಾಜರಾತಿ, ಮಕ್ಕಳಿಗೆ ನೀಡುತ್ತಿರುವ ಆಹಾರ, ಆಟಿಕೆ ಸಾಮಾನುಗಳನ್ನು, ಕೂಸಿನ ಮನೆ ಕಡತಗಳನ್ನು ಪರಿಶೀಲಿಸಿದರು. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ವ್ಯವಸ್ಥಿತವಾಗಿ ಪೌಷ್ಠಿಕ ಆಹಾರ ಒದಗಿಸಬೇಕು. ಆಟದ ಸಮುಯದಲ್ಲಿ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ವಿತರಿಸಬೇಕು, ಕೂಸಿನ ಮನೆಯ ಗೋಡೆಗಳ ಮೇಲೆ ಇನ್ನೂ ಹೆಚ್ಚಿನ ಆಕಷರ್ಕ ಚಿತ್ರಗಳು, ವರ್ಣಮಾಲೆಗಳು ಹಾಗೂ ಮೂಲಾಕ್ಷರಗಳನ್ನು ಬಿಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಬಳಿಕ ಗ್ರಂಥಾಲಯದ ಮುಂಭಾಗದಲ್ಲಿರುವ ಜಲಜೀವನ ಮಿಷನ್ ಯೋಜನೆಯಡಿ ನಿರ್ಮಾಣವಾದ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಯನ್ನು ವೀಕ್ಷಿಸಿದರು.

ಜಿಪಂ ಯೋಜನಾ ನಿರ್ದೇಶಕ ಸಿ.ಆರ್. ಮುಂಡರಗಿ, ತಾಪಂ ಇಒ ನೀಲಗಂಗಾ ಬಬಲಾದ, ಸಹಾಯಕ ನಿರ್ದೇಶಕರು(ಗ್ರಾ.ಉ) ಸಂಜಯ ಖಡಗೇಕರ, ರೂಗಿ ಪಿಡಿಒ ಬಸವರಾಜ ಬಬಲಾದ, ಬೆನಕನಹಳ್ಳಿ ಪಿಡಿಒ ಪ್ರಕಾಶ ರಾಠೋಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net