

ತುಮಕೂರು : ಜಿಲ್ಲೆಯಾದ್ಯಂತ 162 ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಅಂಶವನ್ನು ಜಿಲ್ಲಾಡಳಿತ ಬಹಿರಂಗಪಡಿಸಿದೆ.
ಸುಪ್ರೀಂಕೋರ್ಟ್ ಆದೇಶ ಹಾಗೂ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ 2009ರ ಸೆ.29ರ ಜಿಲ್ಲಾಡಳಿತದ ವರದಿಯಲ್ಲಿ ಜಿಲ್ಲೆಯಾದ್ಯಂತ ದೇವಸ್ಥಾನ, ಮಸೀದಿ, ಚರ್ಚ್‌ಗಳು ಸೇರಿ ಒಟ್ಟಾರೆ 162 ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 122 ಶ್ರದ್ಧಾ ಕೇಂದ್ರಗಳನ್ನು ತೆರವುಗೊಳಿಸುವುದು, ರಿಲೋಕೆಟ್, ಖಾಸಗಿ ಜಾಗ ಅಥವಾ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
8 ಅನಧಿಕೃತ ಧಾರ್ಮಿಕ ಕೇಂದ್ರಗಳು: ಅನಧಿಕೃತವಾಗಿ ನಿರ್ಮಿಸಿರುವ ದೇವಸ್ಥಾನ, ಚರ್ಚ್, ಮಸೀದಿಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ ಬಳಿಕ ಅಂದರೆ 2009ರ ನಂತರ 8 ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಿಲ್ಲೆಯಲ್ಲಿ ತಲೆ ಎತ್ತಿವೆ. ಅಕ್ರಮವಾಗಿ ನಿರ್ಮಿಸಿರುವ 8 ಧಾರ್ಮಿಕ ಕೇಂದ್ರಗಳ ಪೈಕಿ 2 ಅನ್ನು ತೆರವುಗೊಳಿಸಲಾಗಿದೆ. 6 ಕೇಂದ್ರಗಳಿಗೆ ಇನ್ನೂ ಮುಕ್ತಿ ನೀಡಲಾಗಿಲ್ಲ.
2009ಕ್ಕೆ ಮುನ್ನ ನಿರ್ಮಾಣಗೊಂಡ ಧಾರ್ಮಿಕ ಕೇಂದ್ರಗಳು, 2009ರ ನಂತರ ನಿರ್ಮಾಣಗೊಂಡ ಧಾರ್ಮಿಕ ಕೇಂದ್ರಗಳೆಂದು ಎರಡು ಕೆಟಗರಿ ಮಾಡಲಾಗಿದ್ದು ಒಟ್ಟಾರೆ ಜಿಲ್ಲೆಯಲ್ಲಿ ಅಕ್ರಮವಾಗಿ 162 ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇನ್ನೂ 46 ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಈ ಪೈಕಿ 41 ದೇಗುಲುಗಳು, 5 ಮಸೀದಿಗಳಿವೆ.
ತುಮಕೂರಲ್ಲೇ 23 ಧಾರ್ಮಿಕ ಶ್ರದ್ಧಾ ಕೇಂದ್ರಗಳು: ತುಮಕೂರು ಮಹಾನಗರ ವ್ಯಾಪ್ತಿಯಲ್ಲಿ 23 ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲಿ ಟೌನ್‌ಹಾಲ್‌ಗೆ ಹೊಂದಿಕೊಂಡಂತಿರುವ ಬಿ.ಎಚ್.ರಸ್ತೆಯ ನಾಗರಕಟ್ಟೆ, ದರ್ಗಾ ಹಾಗೂ ಶಿವಕುಮಾರ ಸ್ವಾಮೀಜಿ ಸರ್ಕಲ್ ಬಳಿಯ ದರ್ಗಾ, ಕುಣಿಗಲ್ ರಸ್ತೆಯ ಬನಶಂಕರಿ ದೇವಸ್ಥಾನ, ಜೆ.ಸಿ.ರಸ್ತೆಯ ಅನ್ನಪೂರ್ಣೇಶ್ವರಿ ದೇವಸ್ಥಾನ, ಎಸ್.ಎಸ್.ಪುರಂನ ಶ್ರೀರಾಮ ಮಂದಿರ ದೇವಸ್ಥಾನ ಪ್ರಮುಖವಾಗಿವೆ
ಇತರೆಡೆ 23 ಧಾರ್ಮಿಕ ಕೇಂದ್ರಗಳು : ತಿಪಟೂರು ನಗರಸಭೆ ವ್ಯಾಪ್ತಿಯಲ್ಲಿ-6, ಕೊರಟಗೆರೆಯಲ್ಲಿ-2, ಮಧುಗಿರಿಯಲ್ಲಿ- 4, ತುರುವೇಕೆರೆ -1, ಗುಬ್ಬಿ-3, ತುಮಕೂರು ಗ್ರಾಮಾಂತರದಲ್ಲಿ-1 ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು 2009ಕ್ಕೂ ಮುನ್ನ ಅಕ್ರಮವಾಗಿ ನಿರ್ಮಿಸಲಾಗಿದೆ. 2009ರ ನಂತರ ಶಿರಾ ನಗರ ವ್ಯಾಪ್ತಿಯಲ್ಲಿ 4 ಹಾಗೂ ಗುಬ್ಬಿ ತಾಲೂಕಿನಲ್ಲಿ 2 ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅನಧಿಕೃತವಾಗಿ ತಲೆ ಎತ್ತಿವೆ.
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ಪಾಲಿಸಲಾಗುವುದು. ಜಿಲ್ಲೆಯಲ್ಲೆಡೆ 46 ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವುದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ಅದನ್ನು ಸ್ಥಳೀಯ ಆಡಳಿತದ ಮಾಹಿತಿ ಪಡೆದು ತೆರವುಗೊಳಿಸುವುದೊ, ಬೇರೆಡೆ ಖಾಸಗಿ ಜಾಗಕ್ಕೆ ಸ್ಥಳಾಂತರಿಸುವುದೊ ಎಂಬುದನ್ನು ಹಂತ, ಹಂತವಾಗಿ ಕ್ರಮಕೈಗೊಳ್ಳಲಾಗುವುದು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ