

ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರದ ಟೆಂಡರ್ನಲ್ಲಿ 1,60,097 ಚೀಲಗಳು ಆವಕವಾಗುವ ಮೂಲಕ ಪ್ರಸಕ್ತ ಸಾಲಿನಲ್ಲಿ 5ನೇ ಬಾರಿಗೆ ಲಕ್ಷ ಚೀಲ ದಾಟಿದ ದಾಖಲೆ ಕಂಡಿದೆ.
ಕಳೆದ ಎರಡು ವಾರಗಳಲ್ಲಿ ಸತತ ಮೂರು ಬಾರಿ ಲಕ್ಷ ಚೀಲ ದಾಟಿದ್ದು, ಸೋಮವಾರವೂ ಒಂದೂವರೆ ಲಕ್ಷ ಚೀಲ ಆವಕವಾಗಿದೆ. ಪ್ರಸಕ್ತ ದಿನ ಕಡ್ಡಿ ಕ್ವಿಂಟಾಲ್ಗೆ 56 ಸಾವಿರದಲ್ಲಿ ಮಾರಾಟವಾಗಿದ್ದು, ಡಬ್ಬಿ ತಳಿಯ ಕಾಯಿಗಳು ಕ್ವಿಂಟಾಲ್ಗೆ 60 ಸಾವಿರ ದಾಟುವ ಮೂಲಕ ರೈತರಲ್ಲಿ ಖುಷಿ ಇಮ್ಮಡಿಗೊಳಿಸಿದೆ. ಇಂದಿನ ಮಾರುಕಟ್ಟೆ ಶುಲ್ಕ ಅಂದಾಜು 22 ಲಕ್ಷ ರೂಪಾಯಿ ದಾಟಿದೆ ಎಂದು ತಿಳಿದುಬಂದಿದೆ.
ಮಾರುಕಟ್ಟೆಯಲ್ಲಿ ಆವಕ ಹೆಚ್ಚಿರುವ ಪರಿಣಾಮ ಎಲ್ಲ ಅಂಗಡಿಗಳ ಪ್ರಾಂಗಣಗಳು ಮೆಣಸಿನಕಾಯಿ ಚೀಲಗಳಿಂದ ತುಂಬಿ ತುಳುಕುತ್ತಿತ್ತು. ಚೀಲಗಳ ಲಾಟ್ಗಳ ಸಂಖ್ಯೆಯೂ ಅಧಿಕವಾಗಿ ರಸ್ತೆಯ ಬದಿಯಲ್ಲಿ ಚೀಲಗಳನ್ನು ಹಚ್ಚಲಾಗಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ರೈತರಿಂದ ಗಿಜಿಗಿಜಿ ಎನ್ನುತ್ತಿತ್ತು.
ಸೋಮವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕ್ವಿಂಟಾಲ್ಗೆ 3009-56,591, ಡಬ್ಬಿತಳಿ 3289-60,999, ಗುಂಟೂರು 1679-18,299 ಬೆಲೆಯಲ್ಲಿ ಮಾರಾಟವಾಗಿವೆ.