ಗೋದಾಮಿನಲ್ಲಿದ್ದ 1600 ಕ್ವಿಂಟಲ್ ಅಕ್ಕಿ ಮಾಯ

indian basmathi rice
Published on

ಚನ್ನಪಟ್ಟಣ

ಬಡವರ ಹೊಟ್ಟೆ ಸೇರಬೇಕಾದ ಲಕ್ಷಾಂತರ ಮೌಲ್ಯದ ಅನ್ನ ಭಾಗ್ಯ ಅಕ್ಕಿ ಗೋದಾಮಿನಲ್ಲೇ ಮಾಯವಾಗಿರುವ ಘಟನೆ ಚನ್ನಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಬರೋಬ್ಬರಿ 1600 ಕ್ವಿಂಟಾಲ್ ಅಕ್ಕಿ ಮಾಯವಾಗಿದ್ದು, ಈ ಮೂಲಕ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿರುವುದು ಬಹಿರಂಗಗೊಂಡಿದೆ. ತಾಲೂಕಿನ ೬೫ ನ್ಯಾಯಬೆಲೆ ಅಂಗಡಿಗೆ ಸಗಟು ಪಡಿತರ ಧಾನ್ಯ ವಿತರಣೆ ಮಾಡುತ್ತಿದ್ದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಈ ಅಪಾರ ಪ್ರಮಾಣದ ಅಕ್ಕಿ ನಾಪತ್ತೆಯಾಗಿದೆ.

ಗೋದಾಮಿನ ಸಿಬ್ಬಂದಿಯಿಂದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಗೋದಾಮು ನಿರ್ವಹಣೆ ಮಾಡುತ್ತಿದ್ದ ಟಿಎಪಿಸಿಎಂಎಸ್ ನೌಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ;

ತಾಲೂಕಿನ ಪ್ರತಿಷ್ಠಿತ ಸಂಸ್ಥೆಯಾದ ಟಿಎಪಿಸಿಎಂಎಸ್ ತಾಲೂಕಿನ ಕೆಲ ನ್ಯಾಯಬೆಲೆ ಅಂಗಡಿಗಳಿಗೆ ಸಗಟು ಪಡಿತರ ಧಾನ್ಯ ವಿತರಣೆ ಮಾಡುವ ಹಕ್ಕು ಹೊಂದಿದ್ದು, ಅದರಂತೆ, ನಗರದ ಸಾತನೂರು ರಸ್ತೆಯಲ್ಲಿ ಗೋದಾಮು ಹೊಂದಿತ್ತು. ಇದರ ಗೋದಾಮಿನ ನಿರ್ವಹಣೆ ಹಾಗೂ ಹೊಣೆಯನ್ನು ಸಂಸ್ಥೆಯ ಸಿಬ್ಬಂದಿ ಚಂದ್ರು ಎಂಬಾತನಿಗೆ ನೀಡಲಾಗಿತ್ತು. ಕೆಲದಿನಗಳಿಂದ ಗೋದಾಮಿನಲ್ಲಿ ಗೋಲ್ ಮಾಲ್ ನಡೆಯುತ್ತಿದೆ ಎಂಬ ಗುಸುಗುಸು ಹರಿದಾಡುತಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಆಹಾರ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾಗ, ಗೋದಾಮಿನಲ್ಲಿ ಅಕ್ಕಿ ಕಾಣೆಯಾಗಿರುವುದು ಕಂಡುಬಂದಿದೆ.

ಇಲಾಖೆಯ ಉಪ ನಿರ್ದೇಶಕಿ ರಮ್ಯ, ತಹಸೀಲ್ದಾರ್ ಮಹೇಂದ್ರ, ಆಹಾರ ಇಲಾಖೆಯ ಶಿರಸ್ಥೆದಾರ್ ಶಾಂತಕುಮಾರಿ, ನಗರ ಪೊಲೀಸರ ಸಹಕಾರದಿಂದ ಗೋದಾಮನ್ನು ಪರಿಶೀಲನೆ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದರೊಂದಿಗೆ, ಗೋದಾಮಿನ ಸಿಬ್ಬಂದಿಯನ್ನು ಸಹ ವಿಚಾರಣೆ ನಡೆಸಲಾಗಿದೆ. ಮೇಲ್ನೋಟಕ್ಕೆ ಅಕ್ಕಿ ನಾಪತ್ತೆಯಾಗಿರುವುದು ದೃಢಪಟ್ಟಿತ್ತು. ಸದ್ಯ ಟಿಎಪಿಸಿಎಂಎಸ್ ಸಿಬ್ಬಂದಿ ಚಂದ್ರು ಎಂಬಾತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಇದರೊಂದಿಗೆ, ಗೋದಾಮನ್ನು ಸೀಜ್ ಮಾಡಲಾಗಿದೆ. ಗೋಲ್ ಮಾಲ್ ಆಗಿರುವ ಅಕ್ಕಿಯ ಮೌಲ್ಯ ೫೦ ಲಕ್ಷಕ್ಕೂ ಅಧಿಕ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ವಿಚಾರಣೆ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net