

ಬೆಂಗಳೂರು:ರಾಜಧಾನಿ ರಸ್ತೆಗಳ ಗುಣಮಟ್ಟ ಹೆಚ್ಚಿಸಲು ನಗರಾದ್ಯಂತ 1,600 ಕಿ.ಮೀ. ಬ್ಲ್ಯಾಕ್ ಮತ್ತು ವೈಟ್ ಟಾಪಿಂಗ್ ಮಾಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಯಶವಂತಪುರ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ರಸ್ತೆಗಳ ಡಾಂಬರೀಕರಣ ಮತ್ತು ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಒಂದೇ ದಿನ 10 ಕಡೆಗಳಲ್ಲಿ ಬ್ಲ್ಯಾಕ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಿಂದೆ 196 ಕಿ.ಮೀ.ಉದ್ದದ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದೆವು. ಇದೀಗ 450 ಕಿ.ಮೀ ಉದ್ದದ ರಸ್ತೆಗೆ ಕಾಮಗಾರಿ ಮಾಡಲಾಗುತ್ತಿದೆ. ಇನ್ನು 350 ಕಿ.ಮೀ ಉದ್ದದ ಕಾಮಗಾರಿ ಡಿಫೆಕ್ಟ್ ಲಾಯಬಲಿಟಿ ಪಿರಿಯಡ್ (ಡಿಎಲ್ಪಿ)ಯಾಗಿ ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಇನ್ನೂ ಕೆಲ ಕಾಲ ಈ ರಸ್ತೆಗಳಲ್ಲಿ ಹಾನಿಯಾದರೆ ಗುತ್ತಿಗೆದಾರರೇ ಅದನ್ನು ಸರಿಪಡಿಸಬೇಕಾಗುತ್ತದೆ. ಹೀಗಾಗಿ, ರಸ್ತೆಯ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದರು.
ಬ್ರ್ಯಾಂಡ್ ಬೆಂಗಳೂರು ಅಡಿ ರಸ್ತೆಗಳ ಉನ್ನತಿಕರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ 6 ಸಾವಿರ ಕೋಟಿ ರೂ.ನೀಡಿದ್ದಾರೆ. ನಗರದ ಮುಕ್ಕಾಲು ಭಾಗದ ರಸ್ತೆಯ ಬ್ಲ್ಯಾಕ್, ವೈಟ್ ಟಾಪಿಂಗ್ ಕೆಲಸ ತೆಗೆದುಕೊಂಡಿದ್ದೇವೆ. ಈ ರೀತಿಯ ರಸ್ತೆಗಳು 30 ವರ್ಷ ಬಾಳಿಕೆ ಬರುತ್ತದೆ. ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು,ಸ್ವತಃ ನಾನೇ ರಸ್ತೆಗಳ ಕಾಮಗಾರಿ ಪರಿಶೀಲನೆ ಮಾಡಿದ್ದೇನೆ. 1,600 ಕಿ.ಮೀ ಉದ್ದದ ಮುಖ್ಯರಸ್ತೆ (ಆರ್ಟಿರಿಯಲ್) ಉಪಮುಖ್ಯ ರಸ್ತೆ (ಸಬ್ ಆರ್ಟಿರಿಯಲ್ ರಸ್ತೆ)ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ತಂಡ ರಚಿಸಲಾಗಿದೆ ಎಂದು ಡಿಸಿಎಂ ಹೇಳಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿ ಮತ್ತಿತರರಿದ್ದರು.
2 ಸಾವಿರ ಕೋಟಿ ರೂ.ನೆರವು:ಪೊಲೀಸ್ ಜಂಟಿ ಆಯುಕ್ತರ ಜತೆ ಚರ್ಚೆ ಮಾಡಿದ್ದು, ಎಲ್ಲೆಲ್ಲಿ ರಸ್ತೆ ಸರಿಯಿಲ್ಲ ಎಂದು ಪೊಲೀಸರ ಗಮನಕ್ಕೆ ಬರುತ್ತದೆಯೋ ಅದನ್ನು ಪಾಲಿಕೆ ಆಯುಕ್ತರಿಗೆ ತಿಳಿಸಬೇಕೆಂದು ತಿಳಿಸಿದ್ದೇನೆ. ರಸ್ತೆ ಹದಗೆಟ್ಟಿರುವುದು ನಮ್ಮ ಇಂಜಿನಿಯರ್ಗಳಿಗೆ, ಶಾಸಕರ ಕಣ್ಣಿಗೆ ಕಾಣದಿರಬಹುದು. ಆದರೆ, ಪೊಲೀಸ್ ಇಲಾಖೆಯವರ ಗಮನಕ್ಕೆ ಬಂದರೆ ಅದನ್ನು ಲಿಖಿತ ರೂಪದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಮಳೆನೀರುಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಶ್ವಬ್ಯಾಂಕ್ನಿಂದ 2 ಸಾವಿರ ಕೋಟಿ ರೂ.ನೆರವು ಪಡೆಯುತ್ತಿದ್ದೇವೆ ಎಂದು ಡಿಸಿಎಂ ವಿವರಿಸಿದರು. ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಕಸದ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ ಇದನ್ನು ಬಗೆಹರಿಸುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ನಾವು ಟೆಂಡರ್ಗಳನ್ನು ಕರೆಯಲಾಗಿದೆ. ನಮ್ಮ ಕೆಲಸ ಮಾಡುತ್ತೇವೆ. ಟೀಕೆಗಳು ಸಾಯುತ್ತವೆ ಮತ್ತು ಕೆಲಸಗಳು ಉಳಿಯಲಿವೆ ಎಂದರು.