16 ರಿಂದ ಅನಿರ್ದಿಷ್ಟಾವಧಿ ಮುಷ್ಕರ

Published on

ಗುಂಡ್ಲುಪೇಟೆ : ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಸಲುವಾಗಿ ಸಾಮೂಹಿಕ ನಾಯಕತ್ವದ ರೈತ ಸಂಘಟನೆ ಸೆ.16ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.

ಅರಣ್ಯ ಇಲಾಖೆ ಕಾಡಂಚಿನ ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವ ಬದಲು ದಂಧೆಗಳಲ್ಲಿ ತೊಡಗಿಸಿಕೊಂಡಿದೆ. ಕಂದಾಯ ಇಲಾಖೆಯು ರೈತರನ್ನು ಅಕ್ಷರಶಃ ನಿರ್ಲಕ್ಷಿಸಿದೆ. ಪೊಲೀಸ್ ಇಲಾಖೆ ರೈತರಿಗೆ ರಕ್ಷಣೆ ನೀಡುವ ಬದಲು ದಬ್ಬಾಳಿಕೆ ನಡೆಸುತ್ತಿದೆ. ಆರ್‌ಟಿಸಿ, ಪಹಣಿ ನೀಡುವಲ್ಲಿ ವಿಳಂಬ, ಜಮೀನು ದಾಖಲೆಗಳು ಮತ್ತು ಸರ್ವೇ ನಂಬರ್‌ಗಳಲ್ಲಿ ತಪ್ಪುಗಳು, ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ಹೆಚ್ಚು ಸಮಯ ಕಾಯುವುದು, ಲಂಚ, ಅನಧಿಕೃತ ಶುಲ್ಕ ಬೇಡಿಕೆ, ಗ್ರಾಮೀಣ ಜನರಿಗೆ ದಾಖಲೆ ಪ್ರಕ್ರಿಯೆಯಲ್ಲಿ ಮಾರ್ಗದರ್ಶನದ ಕೊರತೆ ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ಮಂಜೂರಾತಿಯಲ್ಲಿ ವಿಳಂಬ, ಸಹಾಯಧನ, ವಿದ್ಯಾರ್ಥಿವೇತನ ಬಿಡುಗಡೆ ವಿಳಂಬ, ಜಾತಿ, ಆದಾಯ, ನಿವಾಸ, ಜನನ/ಸಾವಿನ ಪ್ರಮಾಣಪತ್ರ ನೀಡುವಲ್ಲಿ ವಿಳಂಬ, ಗ್ರಾಮೀಣ ಆರೋಗ್ಯ ಕೇಂದ್ರ ಮತ್ತು ಶಾಲೆಗಳ ನಿರ್ಲಕ್ಷ್ಯ, ಬೆಳೆ ವಿಮೆ ಪರಿಹಾರದಲ್ಲಿ ವಿಳಂಬ, ಬೆಳೆ ಮಾರುಕಟ್ಟೆ ದರ ಮಾಹಿತಿ ಕೊರತೆ, ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ನಾಶದಿಂದ ಸಮಸ್ಯೆಗಳ ಸುಳಿಗೆ ಸಿಲುಕಿದ ರೈತಾಪಿ ವರ್ಗ ಹೈರಾಣಾಗಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹೊನ್ನೂರು ಪ್ರಕಾಶ್.
ಹೊನ್ನೂರು ಪ್ರಕಾಶ್.

ಈ ಹಿನ್ನೆಲೆಯಲ್ಲಿ ಸಂಘಟನೆಯು ಪಟ್ಟಣದಲ್ಲಿ ಬೃಹತ್ ಟ್ರ್ಯಾಕ್ಟರ್ ರ‌್ಯಾಲಿ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಜ್ವಲಂತ ಸಮಸ್ಯೆಗೆ ಪರಿಹಾರ ನೀಡುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಿದೆ. ಆದ್ದರಿಂದ ಎಲ್ಲ ಗ್ರಾಮಗಳ ರೈತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net