16ರಿಂದ ಕಾಸರಗೋಡು ಕೋಟಿ ಪಂಚಾಕ್ಷರಿ ಜಪಯಜ್ಞ : ಗೋವಿಂದನ್ ನಾಯರ್ ಮಾಹಿತಿ : ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಯೋಜನೆ

Published on

ಕಾಸರಗೋಡು: ನಗರದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಡಿಸೆಂಬರ್ 16ರಿಂದ 19ರ ತನಕ ಕೋಟಿ ಪಂಚಾಕ್ಷರಿ ಜಪಯಜ್ಞ ಜರುಗಲಿದೆ. ಎಡನೀರು ಶ್ರೀ ಶುಭಾಶೀರ್ವಾದ ಹಾಗೂ ಉಚ್ಚಿಲ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಕ್ಷೇತ್ರದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವಕೀಲ ಗೋವಿಂದನ್ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

16ರಂದು ಬೆಳಗ್ಗೆ 7ಕ್ಕೆ ಜಪಯಜ್ಞ ಕುಂಡಕ್ಕೆ ಎಡನೀರು ಶ್ರೀಗಳಿಂದ ಪ್ರಥಮ ಸಮಿಧೆ ಸಮರ್ಪಣೆಯೊಂದಿಗೆ ಕೋಟಿ ಪಂಚಾಕ್ಷರಿ ಜಪಯಜ್ಞ ಆರಂಭಗೊಳ್ಳುವುದು. ಸಂಜೆ 5ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರುಶ್ರೀ ಆಶೀರ್ವಚನ ನೀಡುವರು. ಉಚ್ಚಿಲ ಪದ್ಮನಾಭ ತಂತ್ರಿ, ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ, ಕರ್ನಾಟಕ ಮಾನವಹಕ್ಕು ಆಯೋಗ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮೊದಲಾದವರು ಪಾಲ್ಗೊಳ್ಳುವರು. ಡಾ.ಅನಂತ ಕಾಮತ್ ಅಧ್ಯಕ್ಷತೆ ವಹಿಸುವರು.

18ರಂದು ಸಂಜೆ ಶ್ರೀಚಕ್ರ ಪೂಜೆ ನೆರವೇರಲಿದೆ. 19ರಂದು ಬೆಳಗ್ಗೆ ಶ್ರೀರುದ್ರಹೋಮ ಆರಂಭಗೊಳ್ಳಲಿದ್ದು, ಮಧ್ಯಾಹ್ನ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ರುದ್ರಹೋಮ ಪೂರ್ಣಾಹುತಿ ನಡೆಯುವುದು. ವಿವಿಧ ದಿನಗಳಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಹೋಟೆಲ್ ಉದ್ಯಮಿ ರಾಮ್‌ಪ್ರಸಾದ್, ಉಪಾಧ್ಯಕ್ಷ ಅರ್ಜುನ್ ತಾಯಲಂಗಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಉಮೇಶ್ ಅಣಂಗೂರು, ಕಿಶೋರ್ ಕುಮಾರ್, ಗಂಗಾಧರ್ ಕುವೆತ್ತೊಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net