ಆತ್ಮನಿರ್ಭರ ಯೋಜನೆಯಡಿ 16 ಯೋಜನೆ ಜಾರಿ : ಸಂಸದ ಜಿ.ಎಸ್.ಬಸವರಾಜು

aatma
Published on

ತುಮಕೂರು: ಆತ್ಮನಿರ್ಭರ ಭಾರತದಡಿ ಸಣ್ಣ ಕೈಗಾರಿಕೆ (ಎಂಎಸ್‌ಎಂಇ)ಗಳ ಅಭಿವೃದ್ಧಿಗೆ 16 ಯೋಜನೆಗಳನ್ನು ಜಾರಿಗೊಳಿಸಿದ್ದು , ಸ್ವದೇಶಿ ವಸ್ತುಗಳ ಉತ್ಪಾದನೆ ಜತೆಗೆ ಪ್ರಪಂಚದ ಮಟ್ಟಕ್ಕೆ ಬ್ರಾೃಂಡಿಂಗ್ ಮಾಡುವ ಸವಾಲು ನಮ್ಮ ಮುಂದಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆ ನಿಷೇಧಿಸುವ ಮೂಲಕ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಗೆ ಒತ್ತುಕೊಡಲಾಗಿದೆ. ಅತೀ ಸಣ್ಣ ಉತ್ಪಾದನಾ ಘಟಕಗಳು ಹಾಗೂ ಸೇವೆಗಳ ವ್ಯಾಖ್ಯಾನವನ್ನೇ ಬದಲಿಸಲಾಗಿದೆ. ಕಾರ್ಮಿಕರು ಹಾಗೂ ವ್ಯಾಪಾರಿಗಳಿಗೆ ಇಪಿಎಫ್ ಬೆಂಬಲದ ಜತೆಗೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹಂತ ಹಂತವಾಗಿ ಸಾಲ ಖಾತರಿ ಯೋಜನೆ 2.0 ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಜಾರಿ ತರಲಾಗಿದೆ ಎಂದು ತಿಳಿಸಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್: ಕೃಷಿ ಕ್ಷೇತ್ರಕ್ಕೂ ಆದ್ಯತೆಯನ್ನು ಪ್ರಧಾನಿ ಮೋದಿ ನೀಡಿದ್ದು 1 ಲಕ್ಷ ಕೋಟಿ ರೂಪಾಯಿ ಮೊತ್ತದ ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ ಬಿಡುಗಡೆ ಮಾಡಲಾಗಿದೆ. 23 ರಾಜ್ಯಗಳಲ್ಲಿ ಸಹಕಾರಿ ಬ್ಯಾಂಕ್ ಮೂಲಕ 16297.87 ಕೋಟಿ ರೂಪಾಯಿ ಹಾಗೂ ಆರ್‌ಆರ್‌ಬಿ ಮೂಲಕ 20 ರಾಜ್ಯಗಳಿಗೆ 6679.00 ಕೋಟಿ ರೂಪಾಯಿ ಒಟ್ಟು 22976.87 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಅತಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ 1610.00 ಕೋಟಿ ರೂಪಾಯಿ ಸಹ ನೀಡಲಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಮಾಹಿತಿ ನೀಡಿದ್ದಾರೆ.

ವಿಶೇಷ ಹಣಕಾಸಿನ ನೆರವು: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ, ಮೇಕ್ ಇನ್ ಇಂಡಿಯಾಗೆ ಉತ್ತೇಜನ, ಕಲ್ಲಿದ್ದಲು ಘಟಕಗಳ ವಾಣಿಜ್ಯ ಗಣಿಗಾರಿಕೆ, ಸೇನೆಯಲ್ಲಿ ದೇಸೀಯ ವಿನ್ಯಾಸ ಮತ್ತು ತಂತ್ರಜ್ಞಾನಕ್ಕೆ ಆದ್ಯತೆಗೆ ವಿಶೇಷ ಹಣಕಾಸಿನ ನೆರವನ್ನು ಮೋದಿ ಅವರು ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ. 14 ಸಾವಿರ ಕೋಟಿ ರೂಪಾಯಿ ಮೊತ್ತದ ಪಶುಸಂಗೋಪನಾ ಇಲಾಖೆಯ ಮೂಲ ಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪಿಸಿ ಹೈನೋದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲದೆ, ಒಂದು ದೇಶ-ಒಂದು ಮಾರುಕಟ್ಟೆ-ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಜಾರಿ ತರುವ ಮೂಲಕ ಅನ್ನದಾತನಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಅಷ್ಟೆ ಅಲ್ಲದೇ ನವಭಾರತ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತದ ಸ್ವಾವಲಂಭಿ ಭಾರತ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆ ಮೂಲಕ 'vocal for local and make it global’ ಪರಿಕಲ್ಪನೆಗೆ ಒತ್ತುಕೊಟ್ಟಿದ್ದಾರೆ. ಜಿ.ಎಸ್.ಬಸವರಾಜು ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net