ಪ್ರಗತಿ ಪಥದಲ್ಲಿ ಜಿಲ್ಲೆಯ ೧೬ ಸರ್ಕಾರಿ ಶಾಲೆಗಳು

18adarshkdga3
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆಯ್ಕೆಯಾಗಿದ್ದ ಕೊಡಗು ಜಿಲ್ಲೆಯ ೧೬ ಶಾಲೆಗಳು ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ಅಭಿವೃದ್ಧಿ ಕಂಡಿದ್ದು, ಶಾಲಾ ವಾತಾವರಣ ಮತ್ತಷ್ಟು ಕಲಿಕಾ ಸ್ನೇಹಿಯಾಗಿ ಬದಲಾಗಿದೆ.


ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದ್ದು, ಇದೇ ನಿಟ್ಟಿನಲ್ಲಿ ೨೦೨೧-೨೨ನೇ ಸಾಲಿನಲ್ಲಿ ಶಾಲಾ ಕಾಲೇಜು ಅಭಿವೃದ್ಧಿಗೂ ಸರ್ಕಾರ ಯೋಜನೆ ಹಮ್ಮಿಕೊಂಡಿತ್ತು. ಇದರಲ್ಲಿ ಜಿಲ್ಲೆಯ ೧೬ ಶಾಲೆಗಳು ಆಯ್ಕೆಯಾಗಿದ್ದವು. ಪ್ರಸ್ತುತ ೧೨ ಶಾಲೆಯಲ್ಲಿ ನಾನಾ ಅಭಿವೃದ್ಧಿ ಕಾರ್ಯ ಸಂಪೂರ್ಣ ಪೂರ್ಣಗೊಂಡಿದ್ದು, ನಾಲ್ಕು ಶಾಲೆಯಲ್ಲಿ ಕೊನೆಯ ಹಂತದ ನಾನಾ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.


ಶಾಲಾ, ಕಾಲೇಜುಗಳನ್ನು ಗುರುತಿಸಿ, ಅಲ್ಲಿನ ವಿದ್ಯಾರ್ಥಿಗಳನ್ನು ಸಮುದಾಯ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ ತಾಲೂಕಿನ ೩ ಹಾಗೂ ಪೊನ್ನಂಪೇಟೆ ತಾಲೂಕಿನ ೪ ಶಾಲೆಗಳು ಆಯ್ಕೆಯಾಗಿದ್ದವು. ತಲಾ ೧೦ ಲಕ್ಷ ರೂ ವೆಚ್ಚದಲ್ಲಿ ಶಾಲೆಗೆ ಬೇಕಿರುವ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಮತ್ತಿತರ ಸೌಲಭ್ಯ ಪಡೆದುಕೊಳ್ಳಲು ಅಮೃತ ಶಾಲಾ ಸೌಲಭ್ಯ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.


ಯೋಜನೆಗೆ ಆಯ್ಕೆಯಾದ ಶಾಲೆಗಳು ಆದ್ಯತೆ ಮೇರೆಗೆ ಡಿಜಿಟಲ್ ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ್ ತರಗತಿ, ಕ್ರೀಡಾ ಸಾಮಾಗ್ರಿ, ನೀರಿನ ಸೌಲಭ್ಯ, ಶೌಚಾಲಯ, ಶಾಲಾ ಮೇಲ್ಛಾವಣಿ, ಶಾಲಾ ಉಪಯೋಗಕ್ಕೆ ಬೋರ್‌ವೆಲ್ ಕೊರೆಸುವುದು, ಕಂಪ್ಯೂಟರ್, ಲ್ಯಾಪ್‌ಟಾಪ್, ಪ್ರೋಜೆಕ್ಟರ್, ಪ್ರಿಂಟರ್, ಲ್ಯಾಬ್ ಮೆಟಿರಿಯಲ್, ಗ್ರೀನ್ ಬೋರ್ಡ್, ವೈಟ್ ಮಾರ್ಕರ್ ಬೋರ್ಡ್, ವಾಟರ್ ಫಿಲ್ಟರ್, ಮೈಕ್ ಸೆಟ್, ಹೈಟೆಕ್ ಶೌಚಾಲಯ, ೧೦೦ ಮೀ ಕಾಂಪೌಡ್, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಗ್ರಂಥಾಲಯಕ್ಕೆ ಬೇಕಾದ ಕಪಾಟುಗಳು, ೧೦ ತರಗತಿ ಕೊಠಡಿಗಳಿಗೆ ಸುಣ್ಣ-ಬಣ್ಣ, ನೆಲದ ಹಾಸು, ಪ್ರಯೋಗಾಲಯಕ್ಕೆ ಸೀಲಿಂಗ್, ಶಾಲೆಯ ಮುಂಭಾಗದ ಕಟ್ಟಡಗಳಿಗೆ ಸುಣ್ಣ ಬಣ್ಣ, ಗ್ರಂಥಾಲಯಗಳಿಗೆ ಕುರ್ಚಿ, ಅಲ್ಮೇರಾ, ಮೇಜು, ರ‌್ಯಾಕ್, ಕೊಠಡಿಗಳಿಗೆ ಟೈಲ್ಸ್‌ಗಳನ್ನು ಅಳವಡಿಸಿಕೊಂಡಿದೆ.


೧೬ ಶಾಲೆಗಳು ಆಯ್ಕೆ: ಜಿಲ್ಲೆಯಲ್ಲಿ ಅತೀ ಹೆಚ್ಚು ಮಕ್ಕಳಿರುವ ಶಾಲೆ, ಆಧುನಿಕ ಸೌಲಭ್ಯಗಳಿಂದ ವಂಚಿತವಾಗಿರುವ ಶಾಲೆಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಈ ಯೋಜನೆಗೆ ಶಾಲೆಗಳನ್ನು ಆಯ್ಕೆ ಮಾಡಲಾಗಿತ್ತು. ಜಿಲ್ಲೆಗೆ ಸಂಬಂಧಿಸಿದಂತೆ ಆರ್‌ಎಂಎಸ್‌ಎ ಉನ್ನತೀಕರಣ ಪ್ರೌಢಶಾಲೆ ಹೊದವಾಡ, ಸ.ಹಿ.ಪ್ರಾ. ಶಾಲೆ ಸಂಪಾಜೆ, ಸ.ಹಿ.ಪ್ರಾ. ಶಾಲೆ ಕಡಂಗ, ಸ.ಪ್ರೌ ಶಾಲೆ ಮಾದಾಪುರ, ಸ.ಹಿ.ಪ್ರಾ ಶಾಲೆ ದೊಡ್ಡಮಳ್ತೆ, ಸ.ಮಾ.ಪ್ರಾ ಶಾಲೆ ಕೊಡ್ಲಿಪೇಟೆ, ಸ.ಹಿ.ಪಾ. ಶಾಲೆ ವಾಲ್ನೂರು ತ್ಯಾಗತ್ತೂರು, ಸ.ಮಾ.ಪ್ರಾ.ಶಾಲೆ ಹೆಬ್ಬಾಲೆ, ಸ.ಮಾ.ಪ್ರಾ.ಶಾಲೆ ಸುಂಟಿಕೊಪ್ಪ, ಸ.ಹಿ.ಪ್ರಾ.ಶಾಲೆ ಹೆಗ್ಗಳ, ಸ.ಮಾ.ಪ್ರಾ.ಶಾಲೆ ಅಮ್ಮತ್ತಿ, ಸ.ಮಾ.ಪ್ರಾ.ಶಾಲೆ ಪಾಲಿಬೆಟ್ಟ, ಸ.ಮಾ.ಪ್ರಾ.ಶಾಲೆ ಟಿ.ಶೆಟ್ಟಿಗೇರಿ, ಸ.ಹಿ.ಪ್ರಾ.ಶಾಲೆ ತಿತಿಮತಿ, ಸ.ಮಾ.ಪ್ರಾ.ಶಾಲೆ ಗೋಣಿಕೊಪ್ಪ ಮತ್ತು ಸ.ಹಿ.ಪ್ರಾ ಶಾಲೆ ಕುಟ್ಟ ಆಯ್ಕೆಯಾತ್ತು. ಸದ್ಯ ಸ.ಪ್ರೌ ಶಾಲೆ ಮಾದಾಪುರ, ಸ.ಮಾ.ಪ್ರಾ ಶಾಲೆ ಕೊಡ್ಲಿಪೇಟೆ, ಸ.ಹಿ.ಪ್ರಾ. ಶಾಲೆ ಕಡಂಗ ಹಾಗೂ ಸ.ಹಿ.ಪ್ರಾ ಶಾಲೆ ಕುಟ್ಟದಲ್ಲಿ ಪ್ರಗತಿ ಕಾರ್ಯ ಅಂತಿಮ ಹಂತದಲ್ಲಿದೆ.


ನಮ್ಮ ಶಾಲೆ ಅಮೃತ ಶಾಲಾ ಸೌಲಭ್ಯ ಯೋಜನೆಗೆ ಆಯ್ಕೆ ಆಗಿತ್ತು. ಯೋಜನೆಯಡಿಯಲ್ಲಿ ಕೆಲಸ ಪೂರ್ಣಗೊಂಡಿದ್ದು, ನಮ್ಮ ಶಾಲೆಗೆ ಅಗತ್ಯವಿದ್ದ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ ಹಾಗೂ ಸುಣ್ಣಬಣ್ಣ ಬಳಿಯುವ ಕೆಲಸ ಮಾಡಲಾಗಿದೆ.
-ಪಾರ್ವತಿ, ಮುಖ್ಯೋಪಾಧ್ಯಾಯರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ತಿತಿಮತಿ


ಜಿಲ್ಲೆಯ ೧೬ ಶಾಲೆಗಳು ಅಮೃತ ಶಾಲಾ ಸೌಲಭ್ಯ ಯೋಜನೆಗೆ ಆಯ್ಕೆಯಾಗಿದ್ದವು. ಆದ್ಯತೆಯ ಮೇರೆಗೆ ಶಾಲೆಗಳಲ್ಲಿ ಆಯಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ೧೨ ಶಾಲೆಗಳಲ್ಲಿ ಕೆಲಸ ಪೂರ್ಣಗೊಂಡಿದೆ. ನಾಲ್ಕು ಶಾಲೆಗಳ ಕೆಲಸ ಅಂತಿಮ ಹಂತದಲ್ಲಿ ಪ್ರಗತಿಯಲ್ಲಿದೆ.
-ವೇದಮೂರ್ತಿ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net