

ಕೆ.ಎಂ.ದೊಡ್ಡಿ: ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ 16 ಚಿನ್ನದ ಪದಕಗಳನ್ನು ಪಡೆದಿರುವ ಮದ್ದೂರು ತಾಲೂಕಿನ ಅವಸರದಹಳ್ಳಿಯ ಡಾ.ಎ.ಎನ್ ರಾಘವೇಶ್ ಅವರಿಗೆ ಭಾರತೀ ಎಜುಕೇಷನ್ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.
ಭಾರತೀ ಎಜುಕೇಷನ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಭಾರತೀ ಸಂಯುಕ್ತ ಪದವಿ ಪೂರ್ವ ಕಾಲೇಜಿನ(ಎಕ್ಸಲೆನ್ಸ್)ನಲ್ಲಿ ಪಿಯು ವಿದ್ಯಾರ್ಥಿಯಾಗಿದ್ದ ಡಾ.ಎ.ಎನ್ ರಾಘವೇಶ್ ಅವರು 16 ಚಿನ್ನದ ಪದಕಗಳನ್ನು ಪಡೆದುಕೊಂಡಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರೂ ಆದ ಎಂಎಲ್ಸಿ ಮಧು ಜಿ.ಮಾದೇಗೌಡ ಪತ್ರಿಕಾ ಪ್ರಕಟಣೆ ಮೂಲಕ ಹರ್ಷವ್ಯಕ್ತಪಡಿಸಿದ್ದಾರೆ.
ಭಾರತೀ ಎಜುಕೇಷನ್ ಟ್ರಸ್ಟ್ ಹಳ್ಳಿಗಾಡಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನನ್ನ ತಂದೆ ದಿವಂಗತ ಜಿ.ಮಾದೇಗೌಡ ಸ್ಥಾಪಿಸಿದ ಸಂಸ್ಥೆಯಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಹಿನ್ನ್ನೆಲೆಯಲ್ಲಿ ತಳಮಟ್ಟದ ಶಿಕ್ಷಣದಲ್ಲಿ ಸಿಕ್ಕ ಬೋಧನೆಯು ಸಹ ಡಾ. ಎ.ಎನ್.ರಾಘವೇಶ್ ಚಿನ್ನದ ಪದಕಗಳನ್ನು ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದಿದ್ದಾರೆ.
ಕೃಷಿ ಕುಟುಂಬದಲ್ಲಿ ಹುಟ್ಟಿ ಹೈನುಗಾರಿಕೆಯ ವಿಷಯವನ್ನು ಆಯ್ದುಕೊಂಡು ಅದರಲ್ಲಿ ಸ್ನಾತಕೋತ್ತರ ಪದವಿ ಮಾಡಿರುವ ಡಾ.ರಾಘವೇಶ್ 16 ಚಿನ್ನದ ಪದಕ ಗಳಿಸಿರುವುದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು, ಶ್ರಮ ಪಟ್ಟರೆ ಇಂತಹ ಸಾಧನೆ ಮಾಡಬಹುದು ಎಂದಿದ್ದಾರೆ.
ಡಾ.ಎ.ಎನ್.ರಾಘವೇಶ್ ಅವರನ್ನು ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ , ಮುಖ್ಯ ಕಾರ್ಯನಿರ್ವಾಣಾಧಿಕಾರಿ ಆಶಯ್ ಮಧು, ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.