

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಪುತ್ತೂರು ವಿಧಾನಸಭಾ ಕ್ಷೇತ್ರಾದ್ಯಂತ 16 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಹಲವೆಡೆ ಈಗಾಗಲೇ ಕಾಮಗಾರಿ ಆರಂಭಗೊಂಡಿವೆ. ಭವಿಷ್ಯದಲ್ಲಿ ದೊರೆಯುವ ಅನುದಾನಗಳನ್ನು ವ್ಯವಸ್ಥಿತವಾಗಿ ಹಂಚಿ ಅಭಿವೃದ್ಧಿ ನಡೆಸಲಾಗುವುದು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಮಾಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಮಂಗಳವಾರ ಉದ್ಘಾಟಿಸಿ, ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮಾ, ಪೂಡಾ ಸದಸ್ಯರಾದ ನಿಹಾಲ್ ಪಿ.ಶೆಟ್ಟಿ, ಲ್ಯಾನ್ಸಿ ಮಸ್ಕರೇನ್ಹಸ್, ಗ್ರಾ.ಪಂ.ಸದಸ್ಯರಾದ ಮೋನಪ್ಪ ಪೂಜಾರಿ ಕೆರೆಮಾರು, ದಿವ್ಯನಾಥ ಶೆಟ್ಟಿ ಕಾವು, ಸೆಲ್ಮಾ, ವಿನಯಕುಮಾರ್, ಜಯಂತಿ ಪೊಟ್ಟುಮೂಲೆ, ವಲಯ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಹಾಜಿ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.
ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ
ಮಾಡನ್ನೂರು- ಅಂಕೋತ್ತಿಮಾರ್ ಕಾಂಕ್ರೀಟ್ ರಸ್ತೆ, ಕಾವು ರಿಕ್ಷಾ ತಂಗುದಾಣ, ಕಾವು- ಸಸ್ಪೇಟಿ ಕಾಂಕ್ರೀಟ್ ರಸ್ತೆ ಉದ್ಘಾಟಿಸಲಾಯಿತು. ಕೊಳ್ತಿಗೆ ಗ್ರಾಮದ ಬದಿಯಡ್ಕ ಅಲ್ಪಸಂಖ್ಯಾತ ಕಾಲನಿಯ ರಸ್ತೆ, ಕಾವು- ಉಜಿರುಗುರಿ ಕಾಲನಿ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.