

ಹಿರೇಕೆರೂರ: ದಡಾರ ಲಸಿಕೆ ಹಾಕಿಸಿಕೊಂಡ ಅಂಗನವಾಡಿ ಮಕ್ಕಳು ವಾಂತಿ-ಭೇದಿ, ಜ್ವರದಿಂದ ಬಳಲಿದ ಘಟನೆ ತಾಲೂಕಿನ ಚನ್ನಳ್ಳಿ ತಾಂಡಾದಲ್ಲಿ ಡಿ. 12ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಚನ್ನಳ್ಳಿ ಗ್ರಾಮದ ತಾಂಡಾದಲ್ಲಿನ ಅಂಗನವಾಡಿ ಕೇಂದ್ರ ಸಂಖ್ಯೆ 4ರಲ್ಲಿ 3ರಿಂದ 6 ವರ್ಷದೊಳಗಿನ ಒಟ್ಟು 25 ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ 6 ತಿಂಗಳಿನಿಂದ 3 ವರ್ಷದ ಒಳಗಿರುವ 16 ಮಕ್ಕಳಿಗೆ ಕಳೆದ ಗುರುವಾರ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ದಡಾರ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿಯಮದಂತೆ ಲಸಿಕೆಯನ್ನು ಹಂತ ಹಂತವಾಗಿ ಒಟ್ಟು 4 ಬಾರಿ ಹಾಕಲಾಗಿದೆ. ಆದರೆ, ಲಸಿಕೆ ನೀಡಿ 5 ಗಂಟೆಯ ನಂತರ 16 ಮಕ್ಕಳ ಪೈಕಿ 7 ಮಕ್ಕಳಿಗೆ ವಾಂತಿ-ಭೇದಿ ಶುರುವಾಗಿದೆ. ಮೊದಲಿಗೆ ವಿಪರೀತ ಜ್ವರ ಕಾಣಿಸಿಕೊಂಡು, ಆಮೇಲೆ ಮಕ್ಕಳ ಕಾಲುಗಳು ಊದಿಕೊಂಡಿವೆ. ನಂತರ ವಾಂತಿ ಶುರುವಾಗಿದೆ. ಮಕ್ಕಳ ಬಣ್ಣ ಸಂಪೂರ್ಣ ಕೆಂಪಾಗಿದ್ದು, ದೇಹದಲ್ಲಿ ತುರಿಕೆ ಆರಂಭಗೊಂಡಿದೆ. ಹೀಗೆ ಒಂದಿಲ್ಲೊಂದು ಅಡ್ಡಪರಿಣಾಮಗಳು ಹೆಚ್ಚಾಗತೊಡಗಿವೆ.
ಮಕ್ಕಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಹಾಗೂ ಇನ್ನುಳಿದವರನ್ನು ರಾಣೆಬೆನ್ನೂರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳು ಗುಣವಾಗಿ ಮನೆಗೆ ಮರಳಿದ್ದಾರೆ. ಒಂದು ಮಗು ದಾವಣಗೆರೆಯಲ್ಲಿ, ನಾಲ್ವರು ಮಕ್ಕಳು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಿಂದ ಇಡೀ ಗ್ರಾಮದ ಜನ ಬೆಚ್ಚಿ ಬಿದ್ದಿದ್ದು, ಪಾಲಕರಲ್ಲಿ ಆತಂಕ ಉಂಟಾಗಿದೆ. ಈ ಬಗ್ಗೆ ನಾನಾ ಊಹಾಪೋಹಗಳು ಹಬ್ಬ ತೊಡಗಿದ್ದು, ಯಾವ ಕಾರಣದಿಂದ ಲಸಿಕೆ ಅಡ್ಡಪರಿಣಾಮ ಬೀರಿದೆ ಎಂಬುದನ್ನು ಮೇಲಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಚನ್ನಳ್ಳಿ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ನೀಡಲಾದ ದಡಾರ ಲಸಿಕೆ ಅಡ್ಡ ಪರಿಣಾಮ ಬೀರಬಾರದಿತ್ತು. ಈ ವಿಚಾರವಾಗಿ ಡಿಎಚ್ಒ ಗಮನಕ್ಕೆ ತರಲಾಗಿದೆ. ಎಲ್ಲ ದಾಖಲೆ ಹಾಗೂ ಲಸಿಕೆ, ರಕ್ತದ ಮಾದರಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ಪರಿಶೀಲನೆ ಹಂತದಲ್ಲಿದ್ದು, ವರದಿ ಬಂದ ತಕ್ಷಣ ಮಾಹಿತಿ ನೀಡಲಾಗುವುದು. | ಡಾ. ಜಡ್.ಆರ್. ಮಕಾಂದಾರ, ತಾಲೂಕು ಆರೋಗ್ಯಾಧಿಕಾರಿ, ಹಿರೇಕೆರೂರ ದಡಾರ ಲಸಿಕೆ ಹಾಕಿ 5 ಗಂಟೆ ಬಳಿಕ ಮಗುವಿಗೆ ವಿಪರೀತ ಜ್ವರ ಬಂತು. ಆಮೇಲೆ, ಕಾಲುಗಳು ಊದಿಕೊಂಡವು. ವಾಂತಿ, ಮೈಬಣ್ಣ ಕೆಂಪಾಯಿತು. ಬಳಿಕ ತುರಿಕೆಯಾಗತೊಡಗಿತು. ನಂತರ ಆಸ್ಪತ್ರೆಗೆ ಹೋಗಿ 7 ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಮಗು ಚೇತರಿಕೆ ಕಂಡಿದೆ. ಲಸಿಕೆಯ ಅಡ್ಡಪರಿಣಾಮದಿಂದಾಗಿ ನೋವು ಅನುಭವಿಸುವಂತಾಯಿತು. ಇದಕ್ಕೆ ನಿಖರ ಕಾರಣವನ್ನೂ ಆರೋಗ್ಯ ಇಲಾಖೆ ಪತ್ತೆ ಮಾಡಬೇಕು. | ಶೃತಿ ಲಮಾಣಿ, ಪಾಲಕರು