

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೆ 43.75 ಲಕ್ಷ ಮಹಿಳೆಯರು ಶಕ್ತಿ ಯೋಜನೆ ಪ್ರಯೋಜನ ಪಡೆದಿದ್ದಾರೆ.
ಯೋಜನೆಯಡಿ ಈವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗೀಯ ಕಚೇರಿಗೆ 16.59 ಕೋಟಿ ರೂ. ಸಂಗ್ರಹವಾಗಿದೆ. ಈ ಕಚೇರಿ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಸರಾಸರಿ 59 ಸಾವಿರ ಮಹಿಳೆಯರು, ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ನಿತ್ಯ ಸರಾಸರಿ 22.38 ಲಕ್ಷ ರೂ. ಸಂಗ್ರಹವಾಗುತ್ತಿದೆ.
ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಪಾವಗಡ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಚಿತ್ರದುರ್ಗ ತಾಲೂಕುಗಳಿವೆ. ಹೊಸದುರ್ಗ, ಚಳ್ಳಕೆರೆ, ಚಿತ್ರದುರ್ಗ ಹಾಗೂ ಪಾವಗಡದಲ್ಲಿ ಡಿಪೋಗಳಿವೆ. ಹಿರಿಯೂರು, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ತಾಲೂಕುಗಳಲ್ಲಿ ಡಿಪೋಗಳ ನಿರ್ಮಾಣ ಪ್ರಗತಿಯಲ್ಲಿವೆ.
ಐದಾರು ತಿಂಗಳಲ್ಲಿ ಡಿಪೋಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ 309 ಬಸ್‌ಗಳಿದ್ದು,ನಿತ್ಯ 291 ಶೆಡ್ಯೂಲ್‌ಗಳಲ್ಲಿ ಸಂಚರಿಸುತ್ತಿವೆ. ಹೊಸ ಬಸ್ಸುಗಳಿಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಸದ್ಯದಲ್ಲೇ ಬಸ್ಸುಗಳು ನಮ್ಮ ವಿಭಾಗಕ್ಕೂ ಮಂಜೂರಾಗಲಿವೆ ಎಂದು ನಿಗಮದ ವಿಭಾಗೀಯ ನಿಯಂತ್ರಕ ಸಿದ್ದೇಶ್‌ಹೆಬ್ಬಾಳ್ ತಿಳಿಸಿದ್ದಾರೆ.