ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ 16.50 ಲಕ್ಷ ಜನರು ಭೇಟಿ, ದಾಖಲೆಯ ಆದಾಯ

download
Published on

ಆರ್.ಕೃಷ್ಣ ಮೈಸೂರು

ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಿರುವ ‘ದಸರಾ ವಸ್ತುಪ್ರದರ್ಶನ’ ಈ ಬಾರಿ ಹಿಂದೆಂದಿಗಿಂತ ಹೆಚ್ಚು ಜನರನ್ನು ಆಕರ್ಷಿಸಿದೆ. ಸರ್ಕಾರದ ‘ಶಕ್ತಿ’ ಯೋಜನೆಯಿಂದಾಗಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಈ ಬಾರಿಯ ವಿಶೇಷವಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ.25ಕ್ಕೂ ಹೆಚ್ಚು ಜನರು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ವೀಕ್ಷಿಸಿರುವುದು ದಾಖಲೆಯಾಗಿದೆ. ಕಳೆದ ವರ್ಷ 98 ದಿನ ನಡೆದ ವಸ್ತುಪದರ್ಶನಕ್ಕೆ 17 ಲಕ್ಷ ಜನರು ಭೇಟಿ ಕೊಟ್ಟಿದ್ದರು. ಈ ವರ್ಷ 75 ದಿನಗಳಲ್ಲಿಯೇ 16.50 ಲಕ್ಷ ಜನರು ಭೇಟಿ ನೀಡಿದ್ದಾರೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ದಸರಾ ವಸ್ತುಪ್ರದರ್ಶನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
ಡಿ.27ಕ್ಕೆ ಮುಕ್ತಾಯಗೊಳ್ಳಬೇಕಿದ್ದ ವಸ್ತುಪ್ರದರ್ಶನ ಜ. 12ರವರೆಗೆ ಮುಂದುವರಿಯಲಿದೆ. ಉಳಿದ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ, ಭೇಟಿ ನೀಡಿದವರ ಸಂಖ್ಯೆ 20 ಲಕ್ಷ ತಲುಪುವ ವಿಶ್ವಾಸ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ್ದಾಗಿದೆ.
ದಸರಾದಲ್ಲಿ 70 ಸಾವಿರ ಮಂದಿ ಭೇಟಿ:
ನಾಡಹಬ್ಬ ದಸರಾ ಮಹೋತ್ಸವ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ಪ್ರತಿದಿನ ವಸ್ತುಪ್ರದರ್ಶನಕ್ಕೆ 70 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು. ದೀಪಾವಳಿವರೆಗೂ ಪ್ರವಾಸಿಗರ ಸಂಖ್ಯೆ ಏರುಗತಿಯಲ್ಲೇ ಇತ್ತು. ಇನ್ನು ವಾರಾಂತ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ವಸ್ತುಪ್ರದರ್ಶನ ವೀಕ್ಷಿಸಿದ್ದರೆ, ಕ್ರಿಸ್‌ಮಸ್, ಹೊಸ ವರ್ಷದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.
ಈ ಬಾರಿ ವಸ್ತುಪ್ರದರ್ಶನದಲ್ಲಿ 145 ವಾಣಿಜ್ಯ ಮಳಿಗೆ, 60 ಫುಡ್‌ಕೋರ್ಟ್, 40 ಸರ್ಕಾರದ ಮಳಿಗೆ, 46 ಅಮ್ಯೂಸ್‌ಮೆಂಟ್, ಲೈವ್ ಬೈಕ್ ಸ್ಟಂಟ್ ಗಮನ ಸೆಳೆದಿವೆ. ಪ್ರವೇಶ ದ್ವಾರದಲ್ಲಿ ಪ್ರಥಮ ಬಾರಿಗೆ ಐ ಲವ್ ಮೈಸೂರು ದಸರಾ ಎಕ್ಸ್ಪೋ ಸೆಲ್ಫೀ ಪಾಯಿಂಟ್, ವಸ್ತುಪ್ರದರ್ಶನಕ್ಕೆ ಬರುವ ಪ್ರವಾಸಿಗರ ಲಗೇಜ್ ಇಡಲು ಪ್ರತ್ಯೇಕ ಕೊಠಡಿ, ಮರಳಿನಲ್ಲಿ ಅರಳಿದ ಅಪ್ಪುವಿನ 5 ಕಲಾಕೃತಿ, ರಾಜ್ಯ ಸರ್ಕಾರದ ಗ್ಯಾರಂಟಿಗಳಾದ ಗೃಹಜ್ಯೋತಿ, ಗೃಹಲಕ್ಷ್ಮ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತು ನಿರುದ್ಯೋಗ ಭತ್ಯೆಯ ಯುವನಿಧಿ ಯೋಜನೆಗಳ ಪ್ರಚಾರ, ಚಂದ್ರಯಾನ-3ರ ವಿಕ್ರಮ್, ಪ್ರಗ್ಯಾನ್ ರೋವರ್ ಕೂಡ ಗಮನ ಸೆಳೆದವು. ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ವಾರಾಂತ್ಯ, ವಿಶೇಷ ದಿನಗಳಲ್ಲಿ ಗಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.

ಇನ್ನೂ 15 ದಿನ ವಿಸ್ತರಣೆಗೆ ಪ್ರಸ್ತಾವ
ಜನರನ್ನು ಆಕರ್ಷಿಸುತ್ತಿರುವ ದಸರಾ ವಸ್ತುಪ್ರದರ್ಶನವನ್ನು ಇನ್ನೂ 15 ದಿನ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ವಿಸ್ತರಣೆಗೊಂಡಂತೆ ಜ.12ಕ್ಕೆ ವಸ್ತುಪ್ರದರ್ಶನ ಕೊನೆಗೊಳ್ಳಲಿದೆ. ಆದರೆ ಪ್ರವಾಸೋದ್ಯಮಕ್ಕೆ ಅನುಕೂಲ ಕಲ್ಪಿಸುವ ಜತೆಗೆ, ಟೆಂಡರ್‌ದಾರರು ಹೆಚ್ಚು ಬಿಡ್ ಮಾಡಿರುವುದರಿಂದ ಮತ್ತೆ 15 ದಿನ ಮುಂದುವರಿಸಲು ಕೋರಿಕೆ ಇಟ್ಟಿದ್ದಾರೆ. ಅದರಂತೆ, ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ದೊರೆತರೆ ಜ.28 ರವರೆಗೂ ವಸ್ತುಪ್ರದರ್ಶನ ವಿಸ್ತರಣೆಯಾಗಲಿದೆ. ಇಲ್ಲದಿದ್ದರೆ ಜ.12ಕ್ಕೆ ಕೊನೆಯಾಗಲಿದೆ.

ಇತಿಹಾಸದಲ್ಲೇ ಹೆಚ್ಚು ಆದಾಯ
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಇತಿಹಾಸದಲ್ಲಿಯೇ ಈ ಬಾರಿಯ ದಸರಾ ವಸ್ತುಪ್ರದರ್ಶನದಲ್ಲಿ ಹೆಚ್ಚು ಆದಾಯ ಬಂದಿದೆ. ಕಳೆದ ಬಾರಿ ಬೆಂಗಳೂರಿನ ಫನ್‌ವರ್ಲ್ಡ್ ಇಂಡಿಯಾ ರೆಸಾರ್ಟ್ ಪ್ರೈ.ಲಿ. 8.08 ಕೋಟಿ ರೂ.ಗೆ ಟೆಂಡರ್ ಪಡೆದುಕೊಂಡಿತ್ತು. ಈ ಬಾರಿಯೂ ಅದೇ ಸಂಸ್ಥೆ 11.52 ಕೋಟಿ ರೂ.ಗೆ ಟೆಂಡರ್ ಪಡೆದುಕೊಂಡಿದೆ. ಹೀಗಾಗಿ, ಈ ಬಾರಿ ಪ್ರಥಮ ಬಾರಿಗೆ 3.44 ಕೋಟಿ ರೂ. ಹೆಚ್ಚುವರಿ ಆದಾಯ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಬಂದಂತಾಗಿದೆ.
ಬೆಂಗಳೂರು ಮೂಲದ ಎರಡು ಕಂಪನಿಗಳು ಜಾಗತಿಕ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಒಂದು ಕಂಪನಿ ಪ್ರಾಧಿಕಾರ ನಿಗದಿ ಮಾಡಿದ್ದ ದರಕ್ಕಿಂತ ಹೆಚ್ಚಾಗಿ ಅಂದರೆ, 9.5 ಕೋಟಿ ರೂ. ಬಿಡ್ ಮಾಡಿದ್ದರೆ, ಬೆಂಗಳೂರಿನ ಫನ್‌ವರ್ಲ್ಡ್ ಇಂಡಿಯಾ ರೆಸಾರ್ಟ್ ಇಂಡಿಯಾ ಸಂಸ್ಥೆ ಬರೋಬ್ಬರಿ 11.52 ಕೋಟಿ ರೂ.ಗೆ ಬಿಡ್ ಮಾಡಿತ್ತು.
2020 ಮತ್ತು 2021ರಲ್ಲಿ ಕೋವಿಡ್ ಕಾರಣದಿಂದಾಗಿ ವಸ್ತುಪ್ರದರ್ಶನ ನಡೆಯದೆ ಪ್ರಾಧಿಕಾರದ ಆದಾಯಕ್ಕೆ ಖೋತಾ ಆಗಿತ್ತು. 2022ರಲ್ಲಿ ವಸ್ತುಪ್ರದರ್ಶನ ನಡೆದರೂ ಕೋವಿಡ್ ಇನ್ನೂ ಇದ್ದ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಬಿಡ್ ಮಾಡದೆ ಒಬ್ಬರೇ ಬಿಡ್ ಮಾಡಿದ ಪರಿಣಾಮ 8.08 ಕೋಟಿ ರೂ.ಗೆ ಫನ್ ವರ್ಲ್ಡ್ ಗುತ್ತಿಗೆ ಪಡೆದುಕೊಂಡಿತ್ತು. ಆದರೆ ವಸ್ತುಪ್ರದರ್ಶನ ಪ್ರಾಧಿಕಾರದ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಆದಾಯ ಬಂದಿರುವುದು ಇದೇ ಮೊದಲು.

ಜನರಿಂದ ಉತ್ತಮ ಪ್ರತಿಕ್ರಿಯೆ
ಈ ಬಾರಿಯ ದಸರಾ ವಸ್ತುಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರದ ಶಕ್ತಿ ಯೋಜನೆಯೂ ಸಹಕಾರಿ ಆಗಿರುವುದರಿಂದ ಪ್ರಾಧಿಕಾರದ ಇತಿಹಾಸದಲ್ಲಿಯೇ ಹೆಚ್ಚು ಆದಾಯ ಬಂದಿದೆ. ಹೀಗಾಗಿ, ಇನ್ನಷ್ಟು ದಿನ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಲ್ಲಿಂದ ಅನುಮತಿ ಬರಬೇಕಿದೆ. ಮಳಿಗೆದಾರರು ಮುಂದೆ ಬಂದರೆ ಬೇಸಿಗೆ ಮೇಳ ನಡೆಸಲು ಕೂಡ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ.
ರಾಜೇಶ್ ಜಿ.ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net