15ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಹೋರಾಟ: ರಾಜ್ಯ ರೈತ ಸಂಘ ಎಚ್ಚರಿಕೆ

Published on

ಮೈಸೂರು: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಅ.15 ರೊಳಗೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ತಪ್ಪಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.
ರಾಜ್ಯದಲ್ಲಿ ಕಬ್ಬು ಬೆಳೆಗೆ ಕನಿಷ್ಠ ದರವನ್ನು ನಿಗದಿ ಮಾಡುವುದು, ವಿದ್ಯುತ್ ಮೀಟರ್ ಅಳವಡಿಕೆ, ಖಾಸಗೀಕರಣ ಕೈ ಬಿಡುವುದು, ಕೆಆರ್‌ಎಸ್ ಡ್ಯಾಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಣಿಗಾರಿಕೆ ನಿಷೇಧ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘವು ಜಂಬೂಸವಾರಿ ದಿನ ರಸ್ತೆ ಸಂಚಾರ ತಡೆ ನಡೆಸಿದ ಪರಿಣಾಮ ಸರ್ಕಾರದ ಪ್ರತಿನಿಧಿಗಳು ಅ.15ರೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಅದನ್ನು ಈಡೇರಿಸಬೇಕು, ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಕಾರ್ಪೊರೇಟ್‌ಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವನ್ನು ಶೇ.10 ಪರ್ಸೆಂಟ್ ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡಿತ್ತು. ಈಗ ಬಿಜೆಪಿ ಸರ್ಕಾರ 40ರಿಂದ 50 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಅಡಕೆ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿದ್ದು, ಇದರಿಂದಾಗಿ ಬೆಲೆ ಕುಸಿಯುತ್ತಿದೆ. ಆದರೂ ಅಡಕೆ ಬೆಳೆಯುವ ಪ್ರದೇಶದ ಸಂಸದರು, ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. 15 ಸಾವಿರ ಟನ್ ಅಡಕೆಯನ್ನು ಭೂತಾನ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದು, ರೈತರಿಗೆ ದ್ರೋಹವೆಸಗಲಾಗಿದೆ. ಇದನ್ನು ಖಂಡಿಸಿ ಈ ತಿಂಗಳ ಕೊನೆಯಲ್ಲಿ ಅಡಕೆ ಬೆಳೆಯುವ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಕಬ್ಬು ಬೆಳೆಗಾರರು, ಅಡಕೆ ಬೆಳೆಗಾರರು, ಭೂಮಿ ಕಳೆದುಕೊಳ್ಳುವ ಸಾಗುವಳಿದಾರರ ಪರವಾಗಿ ದೊಡ್ಡ ಹೋರಾಟವನ್ನು ರಾಜ್ಯ ರೈತ ಸಂಘ ರೂಪಿಸಲಿದೆ. ಈ ವೇಳೆ ಈ ಜನಪ್ರತಿನಿಧಿಗಳನ್ನು ರಸ್ತೆಯಲ್ಲಿ ಓಡಾಡಲು ಬಿಡದೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಂಬಾಕು ಮಾರುಕಟ್ಟೆ ಅ.10ರಿಂದ ಆರಂಭವಾಗುತ್ತಿದೆ. ಅತಿವೃಷ್ಟಿಯಿಂದ ತಂಬಾಕು ಬೆಳೆ ಇಳುವರಿ ಇಲ್ಲದೆ ನಷ್ಟ ಉಂಟಾಗಿದೆ. ಮಾರುಕಟ್ಟೆ ಪ್ರಾರಂಭಕ್ಕೂ ಮುನ್ನ ವರ್ತಕರು ತಂಬಾಕು ಬೆಳೆಗಾರರ ಸಭೆ ನಡೆಸಿ ಕೆಜಿಗೆ 220 ರೂ. ಪ್ರಾರಂಭದ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಪ್ರಸನ್ನ ಎನ್.ಗೌಡ, ಮಂಡಕಳ್ಳಿ ಮಹೇಶ್, ಪಿ.ಮರಂಕಯ್ಯ, ಮಧುಚಂದನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net