15ನೇ ವರ್ಷದ ಸಂಭ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ

4 vikram 13
Published on

ಧಾರವಾಡ: ಅಂಧಕಾರದಿಂದ ಬೆಳಕಿನೆಡೆಗಿನ ಪಯಣವೇ ಶಿಕ್ಷಣ. ಶಿಕ್ಷಣಕ್ಕೂ ಅದರದ್ದೇ ಆದ ನೀತಿ ನಿಯಮಗಳಿವೆ. ಆ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆ ಸಂಸ್ಕಾರ ನೀಡಿ ಭವಿಷ್ಯಕ್ಕೆ ತಯಾರು ಮಾಡುವ ಶಿಕ್ಷಣ ಕೇಂದ್ರಗಳಲ್ಲಿ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಅಗ್ರಗಣ್ಯವಾಗಿದೆ.

ತಾಲೂಕಿನ ಗರಗ ಗ್ರಾಮದ ಬಳಿಯ ಮಾಧವನಗರದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಅನೇಕ ವೈಶಿಷ್ಟ್ಯತೆಗಳ ಮೂಲಕ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. 2005ರಲ್ಲಿ 51 ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ, ಇಂದು 509 ವಿದ್ಯಾರ್ಥಿಗಳನ್ನು ಹೊಂದಿದೆ. ವಿದ್ಯಾಕೇಂದ್ರ ವಸತಿಯುಕ್ತ ಶಾಲೆಯಾಗಿದೆ.

ವಿದ್ಯಾರ್ಥಿಗಳು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10ರವರೆಗೆ ವಿವಿಧ ಚಟುವಟಿಕೆ ನಡೆಸುತ್ತಾರೆ. ಬೆಳಗ್ಗೆ ಪ್ರಾಥಃಸ್ಮರಣೆ, ಯೋಗ, ವ್ಯಾಯಾಮ, ಪ್ರಾರ್ಥನೆ, ತರಗತಿಗಳು, ಮಧ್ಯಾಹ್ನ ಭೋಜನ, ಪುನರಾವರ್ತನೆ ತರಗತಿಗಳು, ವಿದ್ಯಾರ್ಥಿಗಳ ಆಸಕ್ತಿ ವಿಷಯಗಳು ಹೀಗೆ ಅನೇಕ ಕಾರ್ಯಗಳಲ್ಲಿ ತೊಡಗುತ್ತಾರೆ.

ಪ್ರಾರ್ಥನೆಯಲ್ಲಿ ದೇವನಾಮ ಸ್ಮರಣೆ ಅಲ್ಲದೆ, ಜ್ಞಾಪಕ ಶಕ್ತಿ ವೃದ್ಧಿಸಲು ಶ್ರದ್ಧಾಸೂಕ್ತ, ಮೇಧಾಸೂಕ್ತ, ಭಗವದ್ಗೀತೆ ಪಠಿಸುತ್ತಾರೆ. ಪಠ್ಯದ ಹೊರತಾಗಿ ಅನ್ಯ ಉಪಯುಕ್ತ ವಿಷಯಗಳ ಕುರಿತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರ್ಚಚಿಸುತ್ತಾರೆ. ಈ ಕಾರ್ಯಕ್ಕೆ 10-12 ವಿದ್ಯಾರ್ಥಿಗಳ ಗುಂಪಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ.

ಬದಲಾಗುವ ಪಠ್ಯಕ್ರಮ, ಹೊಸ ವಿಷಯಗಳ ಅಳವಡಿಕೆ, ಮಕ್ಕಳ ಮನಃಸ್ಥಿತಿ ಮನಗಂಡು ಪ್ರಸ್ತುತ ದಿನಗಳಲ್ಲಿ ಶಿಕ್ಷಕರಿಗೂ ಬೋಧನೆ ತರಬೇತಿ ಅನಿವಾರ್ಯ. ಹೀಗಾಗಿ ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ರಾಷ್ಟ್ರೋತ್ಥಾನ ಪರಿಷತ್ ಪ್ರತಿ ವರ್ಷ ಶಿಕ್ಷಕರಿಗೆ ತರಬೇತಿ ನೀಡುತ್ತದೆ. ವಿಷಯ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ, ಶಿಕ್ಷಕರು ತಮ್ಮ ವಿಷಯಗಳು, ಬೋಧನಾ ಶೈಲಿ ಕುರಿತು ತಜ್ಞರೊಂದಿಗೆ ರ್ಚಚಿಸಿ, ಹೊಸ ಬೋಧನಾ ವಿಧಾನ ರೂಪಿಸುವುದು ವಿಶೇಷ. ವಿದ್ಯಾ ಕೇಂದ್ರದಲ್ಲಿ ನುರಿತ 31 ಶಿಕ್ಷಕರಿದ್ದಾರೆ.

ಶಾಲೆಯಲ್ಲಿ ಎಲ್ಲ ಹಬ್ಬಗಳನ್ನು ಆಚರಿಸಿ ಅವುಗಳ ಮಹತ್ವ ತಿಳಿಸುತ್ತಾರೆ. ವಿದ್ಯಾರ್ಥಿಗಳು ಸುತ್ತಲಿನ ಹಳ್ಳಿಗಳಿಗೆ ತೆರಳಿ ಸ್ವಚ್ಛತೆ, ಜಲ, ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಾರೆ. ಪ್ರತಿ ಅಕ್ಟೋಬರ್​ನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಲಕರಿಂದ ಶಾಲೆ ಕುರಿತು ಸಲಹೆ ಪಡೆಯುತ್ತಾರೆ. ಜತೆಗೆ ಪಾಲಕರಿಗೆ ಕುಟುಂಬ ಪ್ರಬೋಧನ ಏರ್ಪಡಿಸಿ, ಮಕ್ಕಳಿಗೆ ಯಾವ ರೀತಿ ಸಂಸ್ಕಾರ ನೀಡಬೇಕು ಎನ್ನುವ ಅರಿವು ಮೂಡಿಸಲಾಗುತ್ತದೆ.

ಕೇಂದ್ರದಲ್ಲಿ 6ರಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಲಿಖಿತ ಪರೀಕ್ಷೆ, ಸಂದರ್ಶನ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶಾಲೆ 15ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸುದೀರ್ಘ ಪಯಣದಲ್ಲಿ ನೂರಾರು ಸಂಸ್ಕಾರಭರಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ವಿನೂತನ ಕಾರ್ಯಗಳು ನಡೆದು, ಮುಂದಿನ ಪೀಳಿಗೆಗೆ ಉತ್ತಮ ಪ್ರಜೆಗಳನ್ನು ನೀಡಲಿ ಎಂಬುದೇ ಆಶಯ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net