ಎಸ್ಪಿ ಕಚೇರಿಯಲ್ಲಿ 15ನೇ ಪೋನ್ ಇನ್ ಕಾರ್ಯಕ್ರಮ

IMG-20230708-WA0007.jpg
Published on

ಬೆಳಗಾವಿ: ಬೆಳಗಾವಿ ‌ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ 15ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸಾರ್ವಜನಿಕರು ಕರೆ ಮಾಡಿ, ದೂರುಗಳನ್ನು ನೀಡಿದರು‌.
ಖಾಸಬಾಗ ನಗರದ ಮಹಿಳೆಯೊರ್ವರು ಕರೆ ಮಾಡಿ ಕಳೆದ ಮಾರ್ಚ್ ತಿಂಗಳಲ್ಲಿ ಅಂಬೇವಾಡಿಲ್ಲಿ ನಮ್ಮ ಸಹೋದರನ ಅಪಘಾತವಾಗಿತ್ತು. ಆದರೆ ಇದು ಅಪಘಾತವಲ್ಲ. ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಅವರು ಎಫ್ ಐಆರ್ ಪ್ರತಿ ನೀಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಅವರ ತಂಡ ಇದು ನಗರ ಪೊಲೀಸ್ ಇಲಾಖೆಗೆ ಬರುವುದರಿಂದ ಪೊಲೀಸ್ ಆಯುಕ್ತರ ಕಚೇರಿಗೆ ಮಾಹಿತಿ ತಿಳಿಸಲಾಗುವುದು ಎಂದರು.
ಅಥಣಿ ತಾಲೂಕಿನ ವ್ಯಕ್ತಿಯೊರ್ವ ಕರೆ ಮಾಡಿ, ತಾಲೂಕಿನಲ್ಲಿ ಅಕ್ರಮವಾಗಿ ಮರಳು ದಂಧೆ ಕೋರರಿಗೆ ಜಿಲ್ಲಾ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಸರಾಯಿ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿದರು. ಇದಕ್ಕೆ ಸ್ಪಂದಿಸಿ ಎಸ್ಪಿ ತಂಡ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಮದುರ್ಗ ತಾಲೂಕಿನ ವ್ಯಕ್ತಿಯೊರ್ವ ಕರೆ ಮಾಡಿ ತಾಲೂಕಿನಲ್ಲಿ ಕೆಲ ಕಿಡಿಗೇಡಿಗಳು ಕುಡಿದು ವಾಹನ ಚಲಾವಣೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಅಂಥ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿದರು. ಅಕ್ರಮ ಸರಾಯಿಗೆ ಕಡಿವಾಣ, ಜೂಜಾಟ, ಟ್ರಾಫಿಕ್ ಸಮಸ್ಯೆ, ಕೌಟುಂಬಿಕ ಕಲಹ, ಜಮೀನು ವಿವಾದ, ನಕಲಿ ಪತ್ರಕರ್ತರ ಹಾವಳಿ ತಡೆಯುವುದು, ಆನ್ ಲೈನ್ ವಂಚನೆ, ನಗರದ ಜನತೆಯ ಸಮಸ್ಯೆ ಸೇರಿದಂತೆ ಜಿಲ್ಲೆಯ ಜನರು ವಿವಿಧ ಸಮಸ್ಯೆಯನ್ನು ಎಸ್ಪಿ ನೇತೃತ್ವದ ತಂಡದ ಎದುರು ಅಳಲನ್ನು ತೋಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್ಪಿ ಅವರ ತಂಡ ಎಲ್ಲ ಕರೆಗಳನ್ನು ಸ್ವೀಕರಿಸಿ ಜನರ ಸಮಸ್ಯೆ ಆಲಿಸಿ ಪರಿಹರಿಸಿದರು.
ಚಿಕ್ಕೋಡಿಯಲ್ಲಿ ಸ್ವಾಮೀಜಿಯಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ನಡೆಸಲು ಹೋಗಿರುವ ಎಸ್ಪಿ ಸಂಜೀವ ಪಾಟೀಲ ಅವರ ಅನುಪಸ್ಥಿತಿಯಲ್ಲಿ ಅವರ ತಂಡ ಪೋನ್ ಇನ್ ಕಾರ್ಯಕ್ರಮ ನಡೆಸಿದರು‌.
ಪಿಎಸ್ಐಗಳಾದ ಮಂಜುನಾಥ ಎ., ಪ್ರಭು ಮುತ್ತತ್ತಿ, ರಂಜಿತ ಗಿಲ್, ಎಎಸ್ ಐ ಶೆಟ್ಟಣ್ಣವರ, ಬಳೆಗಾರ ವಿಠ್ಠಳ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net