

ಧಾರವಾಡ: ನಗರದ ಕಲಾಸಂಗಮ ಸಂಸ್ಥೆಯ 15ನೇ ವಾರ್ಷಿಕೋತ್ಸವ ಅಂಗವಾಗಿ ಸೆ. 2ರಂದು ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನೃತ್ಯ, ಸಂಗೀತ, ಹಾಸ್ಯ, ಜಾನಪದ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಭು ಹಂಚಿನಾಳ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಉದ್ಘಾಟಿಸುವರು. ಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಅಧ್ಯಕ್ಷತೆ ವಹಿಸುವರು. ನಂತರ ಸಂಗೀತ ಮೇಳ, ಜನಪದ ನೃತ್ಯ, ಭರತನಾಟ್ಯ, ಭಕ್ತಿಗೀತೆ, ಹಾಸ್ಯ, ವಚನ ನೃತ್ಯ, ಜೋಗತಿ ನೃತ್ಯ, ಪಂಜಾಬಿ ನೃತ್ಯ ಕಾರ್ಯಕ್ರಮ ಜರುಗಲಿದೆ ಎಂದರು.
ಸಂಜೆ 5 ಗಂಟೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಲ್ ಪ್ರಶಸ್ತಿ ಪ್ರದಾನ ಮಾಡುವರು. ಮನಸೂರ ರೇವಣಸಿದ್ಧೇಶ್ವರ ಮಠದ ಶ್ರೀ ಬಸವರಾಜ ದೇವರು ಸಾನ್ನಿಧ್ಯ ವಹಿಸುವರು ಎಂದರು.