

ಹಾವೇರಿ: ಜಿಲ್ಲೆಯ ಜನತೆಗೆ ವೈದ್ಯಕೀಯ ಕಾಲೇಜ್ ದೀಪಾವಳಿ ಆಚರಣೆಗೂ ಮುನ್ನವೇ ಸರ್ಕಾರ ನೀಡಿದ ದೀಪಾವಳಿ ಗಿಫ್ಟ್ ಆಗಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕಿನ ದೇವಗಿರಿ-ಯಲ್ಲಾಪುರ ಬಳಿ ಆಯೋಜಿಸಿದ್ದ ಮೆಡಿಕಲ್ ಕಾಲೇಜ್ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕರ ಆರೋಗ್ಯದ ಅಭಿಯಾನದ ಭಾಗವಾಗಿ ಹಾವೇರಿ ಸೇರಿ ದೇಶದಲ್ಲಿ 157 ಹೊಸ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರಾಗಿವೆ. ಪ್ರತಿ ರಾಜ್ಯಕ್ಕೊಂದು ಏಮ್್ಸ ಸಂಸ್ಥೆ ಸ್ಥಾಪಿಸಲು ಉದ್ದೇಶಿದ್ದು, ಆ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ ಮಾತನಾಡಿ, ಹಾವೇರಿಗೆ ದೀಪಾವಳಿ ಮೊದಲೇ ವೈದ್ಯಕೀಯ ಕ್ಷೇತ್ರದಲ್ಲಿ ಬೆಳಕು ನೀಡಲಾಗಿದೆ. ಈ ಕಾಲೇಜ್ ಬಳಿ ಆರೋಗ್ಯ ನಗರವನ್ನು ನಿರ್ವಿುಸುವ ಗುರಿ ಹೊಂದಿದ್ದು, ಇಲ್ಲಿ ಎಲ್ಲ ಮಾದರಿಯ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಪ್ರಮುಖ ಮೈಲಿಗಲ್ಲಾಗಿ ಮೆಡಿಕಲ್ ಕಾಲೇಜ್ ಆರಂಭಿಸಲಾಗುತ್ತಿದೆ. ಹಾವೇರಿ ಜಿಲ್ಲೆಯಾದ ನಂತರ ಮೂಲ ಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು 2008ರಲ್ಲಿ ಸಿಎಂ ಯಡಿಯೂರಪ್ಪ ನೀಡಿದರು. ಇಂದು ಮತ್ತೊಂದು ದಾಪುಗಾಲಿಟ್ಟು ಮೆಡಿಕಲ್ ಕಾಲೇಜ್ ಆರಂಭಿಸಲಾಗಿದೆ. ಇಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಗುತ್ತಿಗೆದಾರರಿಗೆ ಎಚ್ಚರಿಕೆ: ಕಟ್ಟಡ ನಿರ್ಮಾಣ ಕಾಮಗಾರಿ ಗುಣಮಟ್ಟದ್ದಾಗಿರಬೇಕು. ಗುಣಮಟ್ಟದಲ್ಲಿ ಯಾವುದೇ ದೋಷವಾದರೂ ಸಹಿಸುವುದಿಲ್ಲ. ಈ ಕುರಿತು ಈಗಲೇ ಸಾರ್ವಜನಿಕವಾಗಿ ಎಚ್ಚರಿಕೆ ನೀಡುತ್ತೇನೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.
ಜಿಲ್ಲಾಡಳಿತದ ವಿರುದ್ಧ ಜೋಶಿ ಗರಂ: ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಕೇಂದ್ರದ ಅನುದಾನವೂ ಇದೆ. ಆದರೆ, ಜಿಲ್ಲಾಡಳಿತಕ್ಕೆ ಡೌಟ್ ಇದ್ದಂಗೆ ಕಾಣುತ್ತಿದೆ. ಈ ಕಾರ್ಯಕ್ರಮದ ಬ್ಯಾನರ್ನಲ್ಲಿ ಪ್ರಧಾನಿಯವರ ಭಾವಚಿತ್ರವನ್ನೇ ಹಾಕಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗರಂ ಆದರು.
ಮೆಡಿಕಲ್ ಕಾಲೇಜ್ ಸಿ.ಎಂ. ಉದಾಸಿಯವರ ಕನಸು: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸುವ ಕನಸು ಕಂಡಿದ್ದು ಸಿ.ಎಂ. ಉದಾಸಿಯವರು. 2012ರಲ್ಲಿಯೇ ಕಾಲೇಜ್ ಮಂಜೂರು ಮಾಡಿಸಿ ಎಂಸಿಐ(ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ)ಗೆ ಕಳಿಸಲಾಗಿತ್ತು. ಆದರೆ, ಕಾಲೇಜ್ ಮಂಜೂರಿಯಾಗಲಿಲ್ಲ. ನಂತರ ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾಗಿ ನನೆಗುದಿಗೆ ಬಿದ್ದಿತ್ತು. ಮತ್ತೆ ಯಡಿಯೂರಪ್ಪ ಅವರ ಅವಧಿಯಲ್ಲಿಯೇ ಇದಕ್ಕೆ ಶಂಕುಸ್ಥಾಪನೆ ನಡೆಯುತ್ತಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.