

ಶಿರಾ: ನಗರ ಸೇರಿದಂತೆ ತಾಲೂಕಿನಲ್ಲಿ ಬಡವರನ್ನು ಗುರುತಿಸಿ ಶೀಘ್ರದಲ್ಲಿಯೇ ಸುಮಾರು 15,000 ನಿವೇಶನ ಹಂಚಿಕೆ ಮಾಡಲು ಸಿದ್ಧತೆ ನಡೆದಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ತಾಲೂಕು ಪಂಚಾಯಿತಿಯ ತಮ್ಮ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಾ ತಾಲೂಕಿನಲ್ಲಿ ನಿವೇಶನದ ಸಮಸ್ಯೆ ದೊಡ್ಡದಾಗಿದೆ. ನಿವೇಶನ ನೀಡಲು ಈ ಹಿಂದೆ 2013ರಲ್ಲಿ ನಿವೇಶನ ನೀಡಲು ಚಾಲನೆ ನೀಡಿದ್ದೆ. ಆದರೆ ಕಂದಾಯ ಇಲಾಖೆಯ ಜಮೀನನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಿ ನಿವೇಶನ ಮಾಡಬೇಕಾಗಿದ್ದರಿಂದ ವಿಳಂಬವಾಗಿತ್ತು. ಸಧ್ಯ ತಾಲೂಕಿನಲ್ಲಿ ಒಟ್ಟು ಸುಮಾರು 460 ಎಕರೆಗೂ ಹೆಚ್ಚು ಜಮೀನನ್ನು ಗುರುತಿಸಿ ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಸುಮಾರು 4000 ನಿವೇಶನಗಳು ಗ್ರಾಮೀಣ ಭಾಗದ ಜನರಿಗೆ ಹಂಚಿಕೆ ಮಾಡಲು ತಯಾರಾಗಿದೆ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 4500 ನಿವೇಶನ ನೀಡಲು ಕಾರ್ಯಾಚರಣೆ ಮಾಡಲಾಗಿದೆ. ಅದರಲ್ಲಿ ನಗರಸಭೆ ಪೌರಕಾರ್ಮಿಕರು, ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ನಿವೃತ್ತ ಸೈನಿಕರಿಗೆ ಪ್ರಥಮ ಹಂತದಲ್ಲಿ ನಿವೇಶನ ನೀಡಲು ಇನ್ನೊಂದು ವಾರದಲ್ಲಿ 904 ನಿವೇಶನಗಳ ಆಯ್ಕೆ ಮಾಡಿ ಪಟ್ಟಿಯಲ್ಲಿ ನಗರಸಭೆ ಸೂಚನಾಫಲಕದಲ್ಲಿ ಹಾಕಲಾಗುವುದು. ನಂತರ ಆ ಪಟ್ಟಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುವುದು ಎಂದರು.
ಶಿರಾದ ಸರ್ವೇ ನಂ.5 ಮತ್ತು 6ರಲ್ಲಿ 13 ಎಕರೆ ಸರ್ಕಾರಿ ಜಾಗದಲ್ಲಿ ಹಲವರು ಸುಮಾರು ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆ ಜಾಗ ಸರ್ಕಾರಿ ಜಮೀನಾಗಿದ್ದು, ಅದನ್ನು ಸರ್ಕಾರ ವಾಪಸ್ಸು ಪಡೆದು ಮನೆ ಕಟ್ಟಿಕೊಂಡಿರುವ ಸುಮಾರು 1500 ಜನರಿಗೆ ಹಕ್ಕು ಪತ್ರ ಹಾಗೂ ಇ ಖಾತೆ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಶಿರಾದಲ್ಲಿ ಹಲವು ವರ್ಷಗಳ ನಂತರ ನಿವೇಶನ ಹಂಚು ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರು ಯಾರಿಗೂ ಹಣ ನೀಡಬೇಡಿ. ಮಧ್ಯವರ್ತಿಗಳು ಹಸ್ತಕ್ಷೇಪ ಮಾಡಬಾರದು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ನಗರಸಭೆ ಸದಸ್ಯ ಬಿ.ಎಂ.ರಾಧಾಕೃಷ್ಣ, ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ತಾಪಂ ಮಾಜಿ ಸದಸ್ಯ ಪಿ.ಬಿ.ನರಸಿಂಹಯ್ಯ, ಮಂಜುಳಬಾಯಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್ ಕುಮಾರ್ ಇದ್ದರು.