ಟೂರಿಸಂಗೆ 15,000 ಕೋಟಿ ರೂ. ನಷ್ಟ

TOURISM
Published on

ಬೆಂಗಳೂರು: ಕರೊನಾದಿಂದಾಗಿ ಪ್ರವಾಸೋದ್ಯಮ ವಲಯ 15,000 ಕೋಟಿ ರೂ. ನಷ್ಟ ಅನುಭವಿಸಿದ್ದು, ಅವಲಂಬಿತ ನೂರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಬೇಸಿಗೆ ಪೂರ್ತಿ ಲಾಕ್​ಡೌನ್ ಜಾರಿಯಲ್ಲಿದ್ದ ಕಾರಣ ವಿಶ್ವಪ್ರಸಿದ್ಧ ಮೈಸೂರು, ಹಂಪಿ ಸೇರಿ ನಿಸರ್ಗ ಸೊಬಗಿನ ತಾಣಗಳು ಸೊರಗಿವೆ.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪ್ರವಾಸೋದ್ಯಮ, ಯುವಸಬಲೀಕರಣ ಮತ್ತು ಕ್ರೀಡಾ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಕಷ್ಟ-ನಷ್ಟ ಬಹಿರಂಗವಾಗಿದೆ. 3 ಲಕ್ಷ ಉದ್ಯೋಗ ಅಪಾಯದ ಅಂಚಿನಲ್ಲಿವೆ. ಅಂದಾಜಿನ ಪ್ರಕಾರ ಕೆಎಸ್​ಟಿಡಿಸಿಗೆ 14 ಕೋಟಿ ರೂ. ಹಾಗೂ ಜಂಗಲ್ ಲಾಡ್ಜಸ್ ಸಂಸ್ಥೆಗೆ 15 ಕೋಟಿ ರೂ. ನಷ್ಟವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕೆಎಸ್​ಟಿಡಿಸಿ ಹಿಂದಿನ 12 ವರ್ಷಗಳಲ್ಲಿ ಅತಿ ಹೆಚ್ಚು ಎಂದರೆ 6.23 ಕೋಟಿ ಮತ್ತು ಜಂಗಲ್ ಲಾಡ್ಜಸ್ ಸಂಸ್ಥೆ 7.86 ಕೋಟಿ ರೂ. ಲಾಭ ಗಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಮಗ್ರ ಅಭಿವೃದ್ಧಿ ಜಾರಿ: ರಾಜ್ಯದ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿ ನಿಟ್ಟಿನಲ್ಲಿ 20 ಪ್ರಮುಖ ತಾಣಗಳ ಸಮಗ್ರ ಅಭಿವೃದ್ಧಿಗೆ ವಿಸõತ ಯೋಜನಾ ವರದಿಗಳು ಸಿದ್ಧವಾಗಿವೆ ಎಂದು ತಿಳಿದುಕೊಂಡ ಸಿಎಂ, ಹಂತಹಂತವಾಗಿ ಜಾರಿಗೊಳಿಸುವಂತೆ ಸೂಚಿಸಿದರು. ಸಚಿವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕ್ರೀಡಾಪಟುಗಳ ಪ್ರೋತ್ಸಾಹಧನಕ್ಕೆ ಬೇಕಾದ ಹಣ ಬಿಡುಗಡೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿ, ಪ್ರಸ್ತುತ ನಡೆಯುತ್ತಿರುವ ಕಾರ್ಯಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಸಿದ್ಧಗಂಗಾಶ್ರೀ ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರ, ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಜನ್ಮಸ್ಥಳ ಬಾನಂದೂರು ಗ್ರಾಮಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರದ ಕಾಮಗಾರಿ ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚಿಸಿದರು.

3.21 ಕೋಟಿ ರೂ. ನೆರವು

ಸಂಕಷ್ಟಕ್ಕೆ ಒಳಗಾಗಿದ್ದ 16,095 ಸಾಹಿತಿಗಳು ಹಾಗೂ ಕಲಾವಿದರಿಗೆ ತಲಾ 2,000 ರೂ. ನಂತೆ ಒಟ್ಟು 3.21 ಕೋಟಿ ರೂ. ನೆರವು ಒದಗಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net