

ಬೆಂಗಳೂರು: ನಗರದಲ್ಲಿ ಡೆಂಘೆ ನಿಯಂತ್ರಿಸಲು ಪಾಲಿಕೆ ಕೈಗೊಂಡಿರುವ ಮನೆ ಮನೆ ಸಮೀಕ್ಷೆಗೆ 1,500 ತಂಡಗಳನ್ನು ರಚಿಸಿ ಅವುಗಳ ಮೂಲಕ ರೋಗ ಪತ್ತೆ ಹಾಗೂ ತಡೆಯುವಿಕೆಗೆ ವಿಶೇಷ ಪ್ರಯತ್ನ ನಡೆಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀ ವಾರ 12 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಲು 1,500 ತಂಡಗಳು ಅವಶ್ಯಕತೆ ಇದೆ. ಸದ್ಯ 1,100 ತಂಡಗಳನ್ನು ರಚಿಸಿದ್ದು, ಆಶಾ ಕಾರ್ಯಕರ್ತೆಯರು ಹಾಗೂ ಎಎನ್‌ಎಂ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿದೆ. ಬಾಕಿ ತಂಡಗಳಿಗೆ ಎನ್‌ಎಸ್‌ಎಸ್ ಮತ್ತು ನರ್ಸಿಂಗ್ ಶಾಲೆಗಳು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು ಎಂದರು.
ಸದ್ಯ ನಗರದಲ್ಲಿ 2 ಸಾವಿರ ಪ್ರಕರಣಗಳು ಕಂಡುಬಂದಿವೆ. ಎರಡು ದಿನಗಳಲ್ಲಿ 78 ಸ್ಯಾಂಪಲ್‌ಗಳ ಪೈಕಿ 12 ದೃಢಪಟ್ಟಿವೆ. ಈ ಪೈಕಿ ಪಶ್ಚಿಮ ವಲಯದಲ್ಲಿ 5 ಪ್ರಕರಣ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯದಲ್ಲಿ ತಲಾ 2 ಪ್ರಕರಣಗಳು ದೃಢಪಟ್ಟಿವೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ವಲಯಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಂಕು ತಡೆಗಲು ಔಷಧಗಳ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಾಹಿತಿ ನೀಡಿಕೆ ಕಡ್ಡಾಯ:
ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಡೆಂಘೆ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವುದು ಕಡ್ಡಾಯ. ಕೆಲ ಆಸ್ಪತ್ರೆಗಳು ಈ ನಿಯಮ ಪಾಲಿಸುತ್ತಿಲ್ಲ. ಈ ಬಗ್ಗೆ ಮೊತ್ತೊಮ್ಮೆ ಎಚ್ಚರಿಕೆ ನೀಡಲಿದ್ದು, ಕಾಲ ಕಾಲಕ್ಕೆ ಮಾಹಿತಿ ನೀಡುವಂತೆ ಡಿಎಚ್‌ಒ ಮೂಲಕ ಸೂಚನೆ ಕೊಡಿಸಲಾಗಿದೆ. ಡೆಂಘೆ ಸಾವು ಪ್ರಕರಣಗಳನ್ನು ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡುವ ವಿಧಾನ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.
ಹಣದ ಮಾಹಿತಿ ಸಂಗ್ರಹಿಸಲು ಸೂಚನೆ:
ಪಾಲಿಕೆಯಿಂದ ಕೆಲ ಸಂಘ-ಸಂಸ್ಥೆಗಳಿಗೆ ಹಣ ಬಿಡುಗಡೆ ಆಗಿದೆ ಎಂಬ ಲೆಕ್ಕಪರಿಶೋಧನಾ ವರದಿ ಆಕ್ಷೇಪಣೆ ಸಂಬಂಧ ಎಲ್ಲ ವಲಯಗಳಿಂದ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಸದ್ಯ ಪಶ್ಚಿಮ ವಲಯಕ್ಕೆ ಸಂಬಂಧಿಸಿದಂತೆ 22 ಕೋಟಿ ರೂ. ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಇದೆ. ವರದಿ ಕೈಸೇರಿದ ಬಳಿಕ ನಿಖರ ಮಾಹಿತಿ ಸಿಗಲಿದ್ದು, ಪಾಲಿಕೆಯಿಂದ ನೋಟಿಸ್ ನೀಡಿ ತನಿಖೆ ಮಾಡುವುದಿಲ್ಲ. ಬದಲಾಗಿ ಈಗಾಗಲೇ ದೂರು ದಾಖಲಾಗಿರುವ ಲೋಕಾಯುಕ್ತ ಪೊಲೀಸರಿಂದಲೇ ತನಿಖೆ ನಡೆಯಲಿದೆ. ಇದರಲ್ಲಿ ಪಾಲಿಕೆ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯ ಆಯುಕ್ತರು ತಿಳಿಸಿದರು.