

ಚನ್ನಮ್ಮನ ಕಿತ್ತೂರು: ಇಲಾಖೆಯಲ್ಲಿ ಹತ್ತು ಹಲವಾರು ಬದಲಾವಣೆ ಮಾಡಬೇಕಿದೆ. ರಸ್ತೆ ಸುಧಾರಣೆ ಹಾಗೂ ನಿರ್ವಹಣೆಗಾಗಿ ಪ್ರತಿ 30 ಕಿಮೀಗೆ ಒಬ್ಬರಂತೆ 1500 ಮೈಲಿ ಕೂಲಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಭೂಮಿಪೂಜೆ ಹಾಗೂ ಶಾಸಕರ ನೂತನ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 5 ಗ್ಯಾರಂಟಿಗಳ ಜತೆಗೂಡಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಕಿತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತೇನೆಂದು ಹೇಳಿದಂತೆ ಇಂದು ಅನುದಾನ ಮಂಜೂರು ಮಾಡಿದ್ದೇನೆ. ಅಲ್ಲದೆ ಹೆಚ್ಚುವರಿಯಾಗಿ 2.5 ರೂ. ಕೋಟಿ ನೀಡಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಕ್ಷೇತ್ರಕ್ಕೆ 5 ಸರ್ಕಾರಿ ಶಾಲೆ ನೀಡಿದ್ದೇನೆ. ಶಾಲೆಗಳ ಕಟ್ಟಡ ನವೀಕರಣಗೊಳ್ಳಲಿವೆ. ಬೈಲಹೊಂಗಲ ಕ್ಷೇತ್ರದಲ್ಲಿಯೂ 2 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಅಲ್ಲಿಯೂ ಅಂತಾರಾಷ್ಟ್ರೀಯ ಈಜುಗೊಳ ನಿರ್ಮಾಣವಾಗಲಿದೆ. ಕ್ಷೇತ್ರದ ಜನರ ನಿರೀಕ್ಷೆಯಂತೆ ಶಾಸಕ ಬಾಬಾಸಾಹೇಬ ಪಾಟೀಲ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಆಸ್ಪತ್ರೆಯಿಂದ ಎದ್ದು ಬರುವ ಜನರಿದ್ದಾರೆ. ಅವರು ಯಾರನ್ನೂ ಮನಸೋಯಿಚ್ಛೆ ಬೈಯ್ಯವ ಮೂಲಕ ಮತ್ತೆ ಸುದ್ದಿಯಲ್ಲಿ ಬರುತ್ತಾರೆ. ಅಂಥವರಿಂದ ಯಾವುದೇ ಪರಿಹಾರ ದೊರೆಯುವದಿಲ್ಲ. ದಿಲ್ಲಿಯಿಂದ ಬಂದು ಇಲ್ಲಿ ನಿಮಗೆ ಟೋಪಿ ಹಾಕಿ ಹೋಗುವರನ್ನು ನಂಬದೆ, ಸದಾ ನಿಮ್ಮೊಂದಿಗಿರುವವರನ್ನು ಬೆಂಬಲಿಸಿ ಎಂದು ಹೆಸರೇಳದೆ ಬಿಜೆಪಿ ನಾಯಕ ಅನಂತಕುಮಾರ ಹೆಗಡೆ ಅವರನ್ನು ಕುಟುಕಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸಚಿವರ ಸಹಕಾರದಿಂದ ಕಿತ್ತೂರು ಪಟ್ಟಣ ಅಭಿವದ್ಧಿಯತ್ತ ಸಾಗಲಾರಂಭಿಸಿದೆ. ಪ್ರತಿ ವರ್ಷವೂ 5 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ ಇಂದು ಸಚಿವರು ತಮ್ಮ ಇಲಾಖೆಯಿಂದಲೇ 7.5 ಕೋಟಿ ರೂ. ಅನುದಾನ ನೀಡಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಕಿತ್ತೂರಿನಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಹಲವಾರು ಯೋಜನೆಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಮನ್ನಡೆಸುವ ಗುರಿಯಿದೆ ಎಂದರು.
ಶಾಸಕ ವಿನಯ ಕುಲಕರ್ಣಿ ಹಾಗೂ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಕಿತ್ತೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ನೇಸರಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಕೇರಿ ಇತರರಿದ್ದರು.