

ಬೆಂಗಳೂರು: ಕನಕಪುರ, ರಾಮನಗರದ ಸರ್ಕಾರಿ ವೈದ್ಯಕೀಯ ಕಾಲೇಜು, ಮೈಸೂರಿನ ಖಾಸಗಿ ಸೇರಿ ಮುಂದಿನ ಶೈಕ್ಷಣಿಕ ವರ್ಷಕ್ಕೆ (2025-26) ರಾಜ್ಯಕ್ಕೆ ಸುಮಾರು 1,500ಕ್ಕೂ ಹೆಚ್ಚಿನ ವೈದ್ಯಕೀಯ ಸೀಟು ಲಭ್ಯವಾಗುವ ನಿರೀಕ್ಷೆ ಹೊಂದಲಾಗಿದೆ.
ಕನಕಪುರ ಮತ್ತು ರಾಮನಗರದಲ್ಲಿ ಈ ವರ್ಷವೇ ವೈದ್ಯಕೀಯ ಕಾಲೇಜುಗಳು ಆರಂಭವಾಗಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) ಅನುಮತಿ ದೊರಕದ ಕಾರಣ ಕೈತಪ್ಪಿದ್ದವು. ಅವುಗಳನ್ನು ಮುಂದಿನ ವರ್ಷಕ್ಕೆ ಸಿಗುವಂತೆ ಮಾಡಲು ರಾಜ್ಯ ಸರ್ಕಾರವು ಪ್ರಯತ್ನಿಸುತ್ತಿದೆ.
ಈ ಸಂಬಂಧ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (ಆರ್‌ಜಿಯುಎಚ್‌ಎಸ್) ಎನ್‌ಎಂಸಿಗೆ ಪ್ರಸ್ತಾವನೆ ಸಲ್ಲಿಸಿದೆ. ಕನಕಪುರ ಮತ್ತು ರಾಮನಗರದಲ್ಲಿ ಕಟ್ಟಡ ಸೇರಿ ಇನ್ನಿತರ ಮೂಲಸೌಕರ್ಯಗಳು ಇನ್ನಷ್ಟೇ ಕಲ್ಪಿಸಬೇಕಿದೆ. ಆದರೆ, ರಾಜ್ಯ ಸರ್ಕಾರವು ಎನ್‌ಎಂಸಿ ನಿಯಮಗಳ ಪ್ರಕಾರ ಸೌಲಭ್ಯ ಕಲ್ಪಿಸುವುದಾಗಿ ಮುಚ್ಚಳಿಕೆ ಪತ್ರವನ್ನು ನೀಡುವುದರ ಆಧಾರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರ್‌ಜಿಯುಎಚ್‌ಎಸ್ ಕುಲಪತಿ ಡಾ. ಎಂ.ಕೆ. ರಮೇಶ್ ತಿಳಿಸಿದ್ದಾರೆ.
ಎನ್‌ಎಂಸಿ ಅನುಮತಿ ನೀಡಿದ 6 ತಿಂಗಳಿನಿಂದ ಒಂದು ವರ್ಷದವರೆಗೆ ಸಮಯವಿರಲಿದೆ. 3 ವರ್ಷದೊಳಗೆ ಕಾಲೇಜು ಆರಂಭಿಸಲು ಸಮಯವಿರಲಿದೆ. ವಿಶ್ವವಿದ್ಯಾಲಯದ ಸ್ಥಳೀಯ ತನಿಖಾ ಸಮಿತಿ (ಎಲ್‌ಐಸಿ) ನೀಡಿರುವ ವರದಿ ಆಧಾರದಲ್ಲಿ ಪ್ರತಿ ವರ್ಷದಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸರ್ಕಾರಿ ಕಾಲೇಜುಇನ್‌ಟೇಕ್ ಹೆಚ್ಚಳ:
ರಾಜ್ಯದಲ್ಲಿ 22 ಸರ್ಕಾರಿ ಕಾಲೇಜುಗಳಿದ್ದು, ಅವುಗಳ ಇನ್‌ಟೇಕ್ ಕೂಡ ಹೆಚ್ಚಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಕಪುರ 100, ರಾಮನಗರ ಮತ್ತು ಮೈಸೂರು ತಲಾ 150ರಂತೆ 300, ಸರ್ಕಾರಿ ಕಾಲೇಜುಗಳಲ್ಲಿ ಸುಮಾರು 250 ಸೀಟು ಹೆಚ್ಚಳ ಮಾಡಲಾಗುತ್ತದೆ. ಇತರೆ ಕಾಲೇಜುಗಳು ಸೇರಿ ಒಟ್ಟು 1,500 ಸೀಟು ಸಿಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 11,500 ವೈದ್ಯಕೀಯ ಸೀಟುಗಳು ದೊರೆಯುತ್ತಿವೆ ಎಂದು ಮಾಹಿತಿ ನೀಡಿದರು.
9 ಕಡೆ ಪಿಪಿಪಿ ಮಾದರಿ:
ಈಗಾಗಲೇ ವೈದ್ಯಕೀಯ ಕಾಲೇಜುಗಳಿರುವ ಕೋಲಾರ, ತುಮಕೂರು, ವಿಜಯನಗರ, ಬೆಂ, ಗ್ರಾಮಾಂತರದ ದೊಡ್ಡಬಳ್ಳಾಪುರ ಸೇರಿ ವಿವಿಧ 9 ಕಡೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ದಲ್ಲಿ ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ.