150 ಸೀಟುಗಳ ಭರ್ತಿಗೆ ಅನುಮತಿ

19KWR3
Published on

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ಗೆ 2020-21 ರ ಶೈಕ್ಷಣಿಕ ವರ್ಷಕ್ಕೆ 150 ಎಂಬಿಬಿಎಸ್ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್​ಎಂಸಿ) ಅನುಮತಿ ನೀಡಿದೆ.

ಕಳೆದ ವರ್ಷದವರೆಗೆ ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಮೆಡಿಕಲ್ ಕಾಲೇಜ್​ಗಳ ಮೌಲ್ಯಮಾಪನ ನಡೆಸುತ್ತಿತ್ತು. 2019 ರಲ್ಲಿ ಎನ್​ಎಂಸಿ ಆಕ್ಟ್ ಜಾರಿಗೆ ಬಂದ ನಂತರ ಈಗ ಎಂಸಿಐ ಬದಲು ಎನ್​ಎಂಸಿ ಮೌಲ್ಯಮಾಪನ ಕಾರ್ಯ ನಡೆಸುತ್ತಿದೆ.

ಕಳೆದ ಸಾಲಿನಲ್ಲಿ ಕಾರವಾರ ಕ್ರಿಮ್ಸ್​ನಲ್ಲಿ ಹೊಸ ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಎಂಸಿಐ ಅನುಮತಿ ನೀಡದೇ ಗೊಂದಲ ಉಂಟಾಗಿತ್ತು. ನಂತರ ಹೈಕೋರ್ಟ್ ಸೂಚನೆಯ ಮೇರೆಗೆ ಎಂಸಿಐ ಅನುಮತಿ ನೀಡಿತ್ತು.

ಈ ವರ್ಷ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಡೀನ್ ಡಾ.ಗಜಾನನ ನಾಯಕ ಕಳೆದ ಸಾಲಿನಲ್ಲಿ ಎಂಸಿಐ ಗುರುತಿಸಿದ ಕೆಲವು ನ್ಯೂನತೆಗಳನ್ನು ಸರಿಪಡಿಸಿ ವರದಿಯನ್ನು ಮರು ಪರಿಗಣನೆಗೆ ನೂತನವಾಗಿ ರಚನೆಯಾದ ಎನ್​ಎಂಸಿಗೆ ಕಳಿಸಿದ್ದರು.

ಸೆ.15 ರಂದು ಎನ್​ಎಂಸಿ ತಂಡ ವಿಡಿಯೋ ಕಾನ್ಪರೆನ್ಸ್ ಮೂಲಕ ಪರಿಶೀಲನೆ ನಡೆಸಿ ಎಲ್ಲ ವ್ಯವಸ್ಥೆಗಳು ತೃಪ್ತಿದಾಯಕವಾಗಿರುವುದರಿಂದ ಈ ಶೈಕ್ಷಣಿಕ ವರ್ಷಕ್ಕೆ 150 ಸೀಟುಗಳ ಭರ್ತಿಗೆ ಅನುವು ಮಾಡಿಕೊಟ್ಟಿದೆ.

ಕ್ರಿಮ್್ಸ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಎನ್​ಎಂಸಿ ಅನುಮೋದನೆ ಪಡೆಯುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಿದ್ದೆ. ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿತ್ತು. ಕಾಲೇಜ್​ಗೆ ಸೀಟು ಭರ್ತಿಗೆ ಮಾನ್ಯತೆ ದೊರಕಿರುವುದು ಸಂತಸ ತಂದಿದೆ. ಡಾ.ಗಜಾನನ ನಾಯಕ ಡೀನ್ ಕ್ರಿಮ್್ಸ, ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net