150 ಶಾಲೆಗಳಿಗೆ ವಿಜ್ಞಾನ ಸಾಮಗ್ರಿ ಕಿಟ್ ವಿತರಣೆ

kkhracs SCIENCE KIT DISTRIBUTION PHOTO-2
Published on

ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘವು ಜಿಲ್ಲೆಯ 150 ಸರ್ಕಾರಿ ಶಾಲೆಗಳಿಗೆ ವಿಜ್ಞಾನ ಪ್ರಯೋಗ ಸಾಮಗ್ರಿ ಕಿಟ್ ವಿತರಿಸಿದೆ.
ಇಲ್ಲಿಯ ಪ್ರತಾಪನಗರದ ಜನಸೇವಾ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಅವರು 90 ಪ್ರಾಥಮಿಕ ಹಾಗೂ 60 ಪ್ರೌಢಶಾಲೆಗಳ ಶಿಕ್ಷಕರಿಗೆ ಕಿಟ್ ವಿತರಿಸಿದರು.
ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸಲು ಪ್ರಯೋಗ ಸಾಮಗ್ರಿ ಕಿಟ್ ವಿತರಣೆ ಮಾಡಲಾಗಿದೆ. ಕಿಟ್ ಮಕ್ಕಳಿಗೆ ವಿವಿಧ ಅವಿಷ್ಕಾರಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ತಿಳಿಸಿದರು.
ಸಂಘವು ಕಲ್ಯಾಣ ಕರ್ನಾಟಕದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಆಧುನಿಕ ಸುಲಭ ಬೋಧನಾ ವಿಧಾನಗಳ ಕುರಿತು ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಿದೆ ಎಂದು ತಿಳಿಸಿದರು.
ವಿಜ್ಞಾನ ವಿಷಯ ಸುಲಭವಾಗಿ ಅರಿಯಲು ಪ್ರಯೋಗಗಳು ಸಹಕಾರಿಯಾಗಲಿವೆ. ಸಂಘ ಆರರಿಂದ ಹತ್ತನೇ ತರಗತಿ ವರೆಗಿನ ಮಕ್ಕಳಿಗೆ ವಿಷಯಾಧಾರಿತ ಕಿಟ್ ವಿತರಣೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ರಾಯಚೂರಿನ ಖ್ಯಾತ ವಿಜ್ಞಾನ ಸಂಪನ್ಮೂಲ ವ್ಯಕ್ತಿ ರಾಜಶೇಖರಯ್ಯ ಹಿರೇಮಠ ಹೇಳಿದರು.
ವಿದ್ಯಾರ್ಥಿಗಳು ವಿಜ್ಞಾನದ ಕುರಿತು ಒಲವು ತೋರಬೇಕು. ವಿಜ್ಞಾನ ಕ್ಞೇತ್ರಕ್ಕೆ ಕೊಡುಗೆ ನೀಡಲು ಪ್ರಯತ್ನಿಸಬೇಕು ಎಂದು ನುಡಿದರು.
ವಿಜ್ಞಾನ ಶಿಕ್ಷಕರಾದ ದೇವಿಪ್ರಸಾದ್ ಕಲಾಲ್, ಮೊಹಮ್ಮದ್ ರಫಿ, ಗುರುನಾಥ ವಟಗೆ, ಸಂಘದ ಜಿಲ್ಲಾ ಸಂಚಾಲಕ ರೇವಣಸಿದ್ದ ಜಾಡರ್, ಬಸವರಾಜ ಅಷ್ಟಗಿ, ಪ್ರಶಾಂತ ಸಿಂಧೆ, ಸಚಿನ್ ನಾಗೂರೆ ಇದ್ದರು.
ಇದಕ್ಕೂ ಮುನ್ನ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರ ತರಬೇತಿ ಕಾರ್ಯಾಗಾರವೂ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net