150 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ: ಡಿ.ಕೆ.ಶಿವಕುಮಾರ್

Published on

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಗೆ 150 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಮಾರ್ಚ್ 7 ಮತ್ತು 8 ರಂದು ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಅಲ್ಲಿ ಅಂತಿಮ ಪರಿಶೀಲನೆಯ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿ ಇನ್ನು 30 ದಿನಗಳಷ್ಟೇ ಇದೆ. 40% ಲಂಚ ಹೊಡೆದಿದ್ದು ಬಿಟ್ಟರೆ ಈ ಸರ್ಕಾರದ ಸಾಧನೆ ಶೂನ್ಯ. ಸಮಾಜದ ಯಾವ ವರ್ಗಕ್ಕೂ ಬಿಜೆಪಿ ಸರ್ಕಾರದಿಂದ ಅನುಕೂಲ ಆಗಿಲ್ಲ. ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಬಿಜೆಪಿಯವರು ಇಂದಿನಿಂದ ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಶುರು ಮಾಡಿದ್ದಾರೆ. ಆದರೆ ರಾಜ್ಯದ ಜನ ಈಗಾಗಲೇ ಬಿಜೆಪಿಯನ್ನು ಮನೆಗೆ ಕಳಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.

ಖರ್ಗೆಗೆ ಅಪಮಾನ: ಖಂಡನೆ

ಬ್ಲಾಂಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದವರೆಗೆ ತಮ್ಮ ಪ್ರತಿಭೆ, ಶ್ರಮ ಮತ್ತು ಪ್ರಾಮಾಣಿಕತೆಯಿಂದ ಬೆಳೆದಿರುವ ದೇಶದ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಬ್ಬರ್ ಸ್ಟಾಂಪ್ ಎಂಬುದಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ನಾಯಕಿಗೆ ಅಪಮಾನ ಮಾಡಿರುವುದಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರುವ ಕೆಲಸ ಮಾಡಿದ್ದಾರೆ ಎಂದು ಖಂಡಿಸಿದರು.

ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್, ರಾಜೀವ್ ಗಾಂಧಿ ಅಂತಹ ಮಹಾನ್ ನಾಯಕರು ಅಧಿಕಾರ ನಡೆಸಿದ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆ ಮೂಲಕವೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಂತಹ ನಾಯಕರನ್ನು ಅಪಮಾನ ಮಾಡುವುದು ತರವಲ್ಲ ಎಂದು ಕಿಡಿಕಾರಿದರು.

ಬಿಎಸ್‌ವೈ ಮೇಲೆ ಪ್ರೀತಿ: ಟೀಕೆ

ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಅಷ್ಟೊಂದು ಪ್ರೀತಿ ಮತ್ತು ಕಾಳಜಿಯಿಂದ ಮಾತನಾಡುತ್ತಿದ್ದಾರೆ. ಆದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಾಕ್ಷಿಣ್ಯವಾಗಿ ಕೆಳಗಿಳಿಸಲಾಯಿತು. ಚುನಾವಣೆ ಕಾರಣಕ್ಕೆ ಈಗ ಅವರ ಮೇಲೆ ಪ್ರೀತಿ ಹುಟ್ಟಿದೆ. ಇಷ್ಟು ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎನ್ನುತ್ತಿದ್ದ ಬಿಜೆಪಿ ನಾಯಕರು ಈಗ ಯಡಿಯೂರಪ್ಪ ಭಜನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬೇಕಾದಾಗ ಬಳಸಿಕೊಂಡು ನಂತರ ಬಿಸಾಡುವ ಸಂಸ್ಕೃತಿ ಬಿಜೆಪಿಯಲ್ಲಿದೆ. ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಹಿರಿಯ ನಾಯಕರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡು ಬರುತ್ತಿದೆ. ಬಿಜೆಪಿಯಲ್ಲಿ ಹಿರಿಯ ಮುತ್ಸದ್ದಿಗಳಾದ ಲಾಲ್ ಕೃಷ್ಣ ಆಡ್ವಾನಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ಯಾವ ರೀತಿ ಮೂಲೆಗುಂಪು ಮಾಡಲಾಗಿದೆ ಎಂಬುದನ್ನು ದೇಶದ ಜನ ಗಮನಿಸಿದ್ದಾರೆ ಎಂದರು.

ಜೆಡಿಎಸ್ ಶಾಸಕರ ಜೊತೆ ಮಾತನಾಡಿರುವುದು ನಿಜ:

ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಮತ್ತು ಎ.ಟಿ. ರಾಮಸ್ವಾಮಿ ಅವರೊಂದಿಗೆ ಪಕ್ಷ ಸೇರ್ಪಡೆ ಸಂಬಂಧ ಮಾತನಾಡಿರುವುದು ನಿಜ. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮಾರ್ಚ್ 5 ರಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭ ಇಟ್ಟುಕೊಂಡಿದ್ದು, ಅದರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸುತ್ತಿದಾರೆ. ಅಂದು ಶಿವಲಿಂಗೇಗೌಡರು ಕಾಂಗ್ರೆಸ್ ಸೇರ್ಪಡೆ ನಿರ್ಧಾರ ಪ್ರಕಟಿಸಬಹುದು ಎಂದರು.

ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಸಹ ಕಾಂಗ್ರೆಸ್ ಸೇರುವ ಕುರಿತು ಮಾತುಕತೆ ನಡೆಸಿ ಮನವಿ ಮಾಡಿದ್ದಾರೆ. ಹಾಸನದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಚ್.ಪಿ. ಸ್ವರೂಪ್ ಅವರೊಂದಿಗೂ ಮಾತನಾಡಿದ್ದೇನೆ. ಸ್ವರೂಪ್ ಜೊತೆ ಇತರ ರಾಜಕೀಯ ಪಕ್ಷಗಳ ಮುಖಂಡರೂ ಮಾತನಾಡಿದ್ದಾರೆ ಎನ್ನಲಾಗಿದೆ. ಅರಕಲಗೂಡು ಮಾಜಿ ಶಾಸಕ ಎ. ಮಂಜು ಅವರೊಂದಿಗೂ ಮಾತುಕತೆ ನಡೆದಿತ್ತು. ಆದರೆ ಈಗಾಗಲೇ ಅವರು ಜೆಡಿಎಸ್ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ರಾಜಕಾರಣದಲ್ಲಿ ಇವೆಲ್ಲಾ ಸಹಜ. ಯಾರನ್ನೇ ಆದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಂತಿಮ ನಿರ್ಧಾರವನ್ನು ಪಕ್ಷದ ವರಿಷ್ಠರ ಸಮಿತಿ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಎಐಸಿಸಿ ವೀಕ್ಷಕ ಅನಿಲ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇ.ಎಚ್. ಲಕ್ಷ್ಮಣ್, ಮಾಜಿ ಸಂಸದ ಎಚ್.ಕೆ. ಜವರೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net