150 ನ್ಯಾಯಬೆಲೆ ಅಂಗಡಿ ಅಮಾನತು

09TMK_Gopalaiah
Published on

ತುಮಕೂರು: ಸಂಕಷ್ಟದಲ್ಲಿರುವ ಬಡವರಿಗೆ ಸರಿಯಾಗಿ ಪಡಿತರ ವಿತರಿಸದ ರಾಜ್ಯದ 150 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ಆಹಾರ ಸಚಿವ ಗೋಪಾಲಯ್ಯ ಹೇಳಿದರು.

ಬುಗುಡನಹಳ್ಳಿಯಲ್ಲಿ ಶನಿವಾರ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪಡಿತರ ವಿತರಿಸಿ ಮಾತನಾಡಿದರು. ರೈತರು ಬೆಳೆದರೆ ದೇಶದ ಅಭಿವೃದ್ಧಿ ಸಾಧ್ಯವಿದ್ದು, ಕೃಷಿ ವಲಯಕ್ಕೆ ಸಡಿಲಿಕೆ ನೀಡಲಾಗಿದೆ ಎಂದರು. ರಾಜ್ಯ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ಹಣ ಪಡೆಯದಂತೆ ಮನವಿ ಮಾಡಿದರೂ, ಮೋಸ ಮಾಡುತ್ತಿದ್ದ ಅಂಗಡಿಗಳು ಹಾಗೂ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.

ರಾಜ್ಯದಲ್ಲಿ 4.65 ಕೋಟಿ ಜನ ಪಡಿತರ ಪಡೆದಿದ್ದಾರೆ, ಕೇಂದ್ರ ಸರ್ಕಾರದ ಪಡಿತರವನ್ನು ಮೇ 1ರಂದು ನೀಡಲು ಆರಂಭಿಸಿದ್ದು, ಎಲ್ಲೆಡೆಯೂ ವಿತರಣೆ ನಡೆಯುತ್ತಿದೆ ಎಂದರು. ವಲಸೆ ಕಾರ್ಮಿಕರು ಪೋರ್ಟಬಲಿಟಿ ಆಧಾರದ ಮೇಲೆ ಇದ್ದಲ್ಲಿಯೇ ಪಡಿತರ ಪಡೆಯಬಹುದು, ಈ ಬಗ್ಗೆ ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸಲಾಗಿದ್ದು, ಬಡವರು ಎಲ್ಲಿಬೇಕಾದರೂ ಅಕ್ಕಿ ಪಡೆಯಬಹುದು ಎಂದರು. ಆಹಾರ ಇಲಾಖೆ ಜೆಡಿ ಶ್ರೀನಿವಾಸಯ್ಯ, ಜಿಪಂ ಉಪಾಧ್ಯಕ್ಷೆ ಶಾರದಾ, ಸದಸ್ಯರಾದ ಶಿವಕುಮಾರ್, ತಾಪಂ ಅಧ್ಯಕ್ಷ ಗಂಗಾಜನೇಯ, ಮಾಜಿ

ಶಾಸಕ ಬಿ.ಸುರೇಶ್‌ಗೌಡ ಮತ್ತಿತರರು ಇದ್ದರು.

ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ : ಪಡಿತರ ಸಿಕ್ಕಿಲ್ಲವೆಂದು ಯಾರೂ ಅತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರಿಗೂ ಪಡಿತರ ವಿತರಿಸಲು ಕ್ರಮವಹಿಸಲಾಗುವುದು ಎಂದು ಕೆ.ಗೋಪಾಲಯ್ಯ ಹೇಳಿದರು. ನಗರದ 6ನೇ ವಾರ್ಡ್ ಭೀಮಸಂದ್ರದಲ್ಲಿ ಶನಿವಾರ ಆಹಾರದ ಕಿಟ್ ವಿತರಿಸಿ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ, ಸರ್ಕಾರ ನಿಮ್ಮ ಜತೆ ಇರಲಿದೆ ಎಂದರು. 2 ಸಾವಿರ ಕಿಟ್: 6ನೇ ವಾರ್ಡ್‌ನಲ್ಲಿ ಸುಮಾರು 2 ಸಾವಿರ ದವಸ ಧಾನ್ಯಗಳ ಕಿಟ್ ಹಂಚಲು ಪಾಲಿಕೆ ಸದಸ್ಯರು ವ್ಯವಸ್ಥೆ ಮಾಡಿಕೊಂಡಿದ್ದು ಮನೆ ಮನೆಗೆ ತೆರಳಿ ಅವಶ್ಯಕತೆ ಇರುವ ಕುಟುಂಬಗಳಿಗೆ ಆಹಾರದ ಕಿಟ್ ಹಂಚಲಾಗುವುದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ಮಾಜಿ ಶಾಸಕ ಬಿ.ಸುರೇಶ್ ಗೌಡ, ಕಾರ್ಪೋರೇಟರ್ ವೀಣಾ, ಮುಖಂಡರಾದ ಮನೋಹರಗೌಡ, ಪಾಲಿಕೆ ಮಾಜಿ ಸದಸ್ಯ ಮಂಜುನಾಥ್ ಇದ್ದರು.

ತುಮಕೂರು ಜಿಲ್ಲೆಯಲ್ಲಿ ಈಗಾಗಲೇ 96 ಸಾವಿರ ರೈತರಿಂದ 2 ಲಕ್ಷ ಮೆಟ್ರಿಕ್‌ಟನ್ ರಾಗಿಯನ್ನು ಖರೀದಿಸಲಾಗಿದೆ. ಇದೀಗ ಹೆಚ್ಚುವರಿಯಾಗಿ ಒಂದು ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಗೋಪಾಲಯ್ಯ ಆಹಾರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net