15 ದಿನದೊಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ

16 (2)
Published on

ಮೈಸೂರು: ಶಿಥಿಲಗೊಂಡಿರುವ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡ ಕುರಿತು 15 ದಿನದೊಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಕಾಸಸೌಧದಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಉಭಯ ಕಟ್ಟಡಗಳನ್ನು ಅಭಿವೃದ್ಧಿ ಮಾಡಬೇಕು. ಇದಕ್ಕಿರುವ ತೊಡಕು ನಿವಾರಣೆ ಮಾಡಬೇಕು. ಕಾಮಗಾರಿಗಳು ಶೀಘ್ರವಾಗಿ ಪ್ರಾರಂಭವಾಗಬೇಕು ಎಂದು ಸಚಿವರ ಗಮನಕ್ಕೆ ತರಲಾಯಿತು.
ಈ ಎರಡೂ ಕಟ್ಟಡಗಳ ನವೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತೆಗೆದುಕೊಂಡಿರುವ ಕ್ರಮ, ಮುಂದಿನ ಕಾಮಗಾರಿಗಳ ಯೋಜನೆ ಏನು ಮಾಡಬೇಕು ಎಂಬ ಬಗ್ಗೆ ಪ್ರಸ್ತಾವನೆಯನ್ನು ಇನ್ನು 15 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ಮೈಸೂರು ನಗರಾಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮೈಸೂರು ಪಾರಂಪರಿಕ ನಗರವಾದ್ದರಿಂದ ನಾಲ್ಕು ಅಂತಸ್ತಿನ ಕಟ್ಟಡಕ್ಕಿಂತ ಹೆಚ್ಚು ಎತ್ತರದ ಕಟ್ಟಡ ಕಟ್ಟಲು ಅನುಮತಿ ಇಲ್ಲ. ಈ ಕುರಿತು ಸರ್ಕಾರದ ಸುತ್ತೂಲೆಯನ್ನು ಪರಿಷ್ಕರಿಸಬೇಕು. ಇದರಿಂದ ಹೆಚ್ಚುವರಿ ಅನುದಾನ ಕ್ರೋಡೀಕರಣ ಮಾಡಲು ಅನುಕೂಲವಾಗುತ್ತದೆ ಎಂಬ ಮನವಿಯನ್ನು ಮಂಡಿಸಲಾಯಿತು.
2005ರ ನಂತರ ಹಂಚಿಕೆ ಮಾಡಿರುವ ನಿವೇಶನಗಳಿಗೆ ಕ್ರಯಪತ್ರ ನೀಡುವುದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ ಸೂಚಿಸಲಾಯಿತು. ಪ್ರಾಧಿಕಾರಗಳಿಗೆ ಹೊಸ ವಾಹನಗಳ ಖರೀದಿ, ಸಹಾಯಕ, ಕಿರಿಯ ಇಂಜಿನಿಯರ್‌ಗಳ ನಿಯೋಜನೆ ಸೇರಿದಂತೆ ಹಲವು ವಿಷಯಗಳಿಗೆ ಕೆಲ ತಿದ್ದುಪಡಿಗಳೊಂದಿಗೆ ಒಪ್ಪಿಗೆ ಪಡೆಯಲು ತೀರ್ಮಾನಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎಲ್.ನಾಗೇಂದ್ರ, ಹರ್ಷವರ್ಧನ್, ಮುಡಾ ಆಯುಕ್ತ ನಟೇಶ್ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net